ನವದೆಹಲಿ, ನ 18 (Daijiworld News/MSP): ಕಳೆದ 90ದಿನಗಳಿಂದ ಚಿದಂಬರಂ ಜೈಲಿನಲ್ಲಿ ಕಳೆದಿದ್ದಾರೆ. ಈ ಹಿನ್ನೆಲೆಯಲ್ಲಿ ಜಾಮೀನು ಅರ್ಜಿ ಮೇಲ್ಮನವಿಯನ್ನು ಶೀಘ್ರವೇ ವಿಚಾರಣೆ ನಡೆಸಬೇಕು ಎಂದು ಸುಪ್ರಿಂ ಕೋರ್ಟ್ ನ ಸಿಜೆಐ ಬೋಬ್ಡೆ ನೇತೃತ್ವದ ಜಸ್ಟೀಸ್ ಬಿಆರ್ ಗವಾಯಿ ಹಾಗೂ ಜಸ್ಟೀಸ್ ಸೂರ್ಯ ಕಾಂತ್ ಅವರನ್ನೊಳಗೊಂಡ ಪೀಠಕ್ಕೆ ಮಾಜಿ ಹಣಕಾಸು ಸಚಿವ ಅವರ ಪರವಾಗಿ ಹಿರಿಯ ವಕೀಲ ಕಪಿಲ್ ಸಿಬಲ್ ಮೇಲ್ಮನವಿ ಸಲ್ಲಿಸಿದ್ದಾರೆ.
ಐಎನ್ ಎಕ್ಸ್ ಮೀಡಿಯಾ ಪ್ರಕರಣದಲ್ಲಿ ಕಾಂಗ್ರೆಸ್ ಹಿರಿಯ ಮುಖಂಡ, ಮಾಜಿ ಹಣಕಾಸು ಸಚಿವ ಪಿ.ಚಿದಂಬರಂ ಹಣಕಾಸು ದುರುಪಯೋಗ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಬಂಧಿಸಿದ್ದರು. ಅಕ್ಟೋಬರ್ 22ರಂದು ಚಿದಂಬರಂಗೆ ಸಿಬಿಐ ಪ್ರಕರಣದಲ್ಲಿ ಜಾಮೀನು ಪಡೆದುಕೊಂಡಿದ್ದರೂ ಅವರಿಗೆ ಇ.ಡಿ ಪ್ರಕರಣದಲ್ಲಿ ಜಾಮೀನು ಸಿಕ್ಕಿರಲಿಲ್ಲ. ಹೀಗಾಗಿ ಚಿದಂಬರಂ ಅವರು ತಿಹಾರ್ ಜೈಲಿನಲ್ಲಿಯೇ 90 ದಿನಗಳನ್ನು ಕಳೆದಿದ್ದಾರೆ.
ಪಿ.ಚಿದಂಬರಂ ಅವರ ಜಾಮೀನು ಅರ್ಜಿಯನ್ನ ದೆಹಲಿ ಹೈಕೋರ್ಟ್ ವಜಾ ಮಾಡಿದ ಬೆನ್ನಲ್ಲೇ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದಾರೆ. ಜಾಮೀನು ಅರ್ಜಿಯ ಮೇಲ್ಮನವಿಯನ್ನು ಮಂಗಳವಾರ ಅಥವಾ ಬುಧವಾರ ಕೈಗೆತ್ತಿಕೊಳ್ಳುವುದಾಗಿ ಸಿಜೆಐ ಬೋಬ್ಡೆ ಈ ಸಂದರ್ಭದಲ್ಲಿ ತಿಳಿಸಿದರು.