ಮೈಸೂರು, ನ 19(Daijiworld News/MB): "ಶಾಸಕ ತನ್ವೀರ್ ಸೇಠ್ ಮೇಲೆ ನಡೆದ ಹತ್ಯೆ ಯತ್ನ ಪ್ರಕರಣದಲ್ಲಿ ಎಸ್.ಡಿ.ಪಿ.ಐ. ಸಂಘಟನೆಯ ಕೈವಾಡವಿರುವ ಸಾಧ್ಯತೆ ಇದೆ. ಆದ್ದರಿಂದ ಈ ಪ್ರಕರಣದ ತನಿಖೆಯನ್ನು ಎಸ್.ಐ.ಟಿ ಗೆ ಒಪ್ಪಿಸಬೇಕು" ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಒತ್ತಾಯಿಸಿದ್ದಾರೆ.
ನಗರದ ಖಾಸಗೀ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ತನ್ವೀರ್ ಸೇಠ್ ಅವರ ಆರೋಗ್ಯ ವಿಚಾರಣೆಗೆ ಬಂದ ಸಿದ್ದರಾಮಯ್ಯರವರು ಮಾಧ್ಯಮದವರೊಂದಿಗೆ ಮಾತಾನಾಡಿ "ತನ್ವೀರ್ ಸೇಠ್ ಗೆ ಹಲ್ಲೆ ಮಾಡಿದ ವ್ಯಕ್ತಿ ಎಸ್.ಡಿ.ಪಿ.ಐ. ಸಂಘಟನೆಯ ಕಾರ್ಯಕರ್ತ. ಈಗಾಗಲೇ ಈ ಘಟನೆಯ ಹಿಂದೆ ಎಸ್.ಡಿ.ಪಿ.ಐ. ಸಂಘಟನೆಯ ಕೈವಾಡವಿರುವ ಕುರಿತು ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ. ಈ ಕೃತ್ಯವನ್ನು ಒಬ್ಬನೇ ಮಾಡಲು ಸಾಧ್ಯವಿಲ್ಲ. ಆದ್ದರಿಂದ ಈ ಘಟನೆಯ ಹಿಂದೆ ಯಾರಿದ್ದಾರೆ ಎಂದು ಪತ್ತೆ ಹಚ್ಚಬೇಕು" ಎಂದು ಹೇಳಿದರು.
"ಜನಪ್ರತಿನಿಧಿಗೆ ಇಂತಹ ಸ್ಥಿತಿ ಬಂದರೆ ಇನ್ನು ಜನಸಾಮಾನ್ಯರ ಪರಿಸ್ಥಿತಿ ಹೇಗೆ? ಇದೊಂದು ಪೂರ್ವ ನಿಯೋಜಿತ ಕೃತ್ಯ. ಹಾಗಾಗಿ ಎಸ್.ಐ.ಟಿ ಗೆ ವಹಿಸಲೇಬೇಕು" ಎಂದು ಒತ್ತಾಯ ಮಾಡಿದರು.
"ಮೊದಲು ಈ ಪ್ರಕರಣದ ತನಿಖೆ ಪೂರ್ಣವಾಗಲಿ ಅದರ ನಂತರ ಈ ಸಂಘಟನೆಯನ್ನು ನಿಷೇಧ ಮಾಡುವ ಕುರಿತು ನಿರ್ಧಾರ ಮಾಡೋಣ" ಎಂದು ಅವರು ತಿಳಿಸಿದರು.