ಮುಂಬೈ, ನ.19(Daijiworld News/SS): ಮಹಾರಾಷ್ಟ್ರದಲ್ಲಿ ಸರ್ಕಾರ ರಚಿಸುವ ಕುರಿತು ಭರವಸೆ ವ್ಯಕ್ತಪಡಿಸಿದ ಶಿವಸೇನೆ ಮುಖ್ಯಸ್ಥ ಸಂಜಯ್ ರಾವತ್, ಶೀಘ್ರದಲ್ಲೇ ಸರ್ಕಾರ ರಚಿಸುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರ್ಕಾರ ರಚಿಸುವ ಜವಾಬ್ದಾರಿ ನಮ್ಮದಲ್ಲ. ಆ ಜವಾಬ್ದಾರಿಯನ್ನು ಹೊಂದಿದವರು ಓಡಿಹೋದರು. ಮಹಾರಾಷ್ಟ್ರದಲ್ಲಿ ರಾಷ್ಟ್ರಪತಿಗಳ ಆಡಳಿತ ಬಂದಿರುವುದು ನಮ್ಮಿಂದಲ್ಲ ಎಂದು ಸ್ಪಷ್ಟಪಡಿಸಿದರು.
ಇದೇ ವೇಳೆ ಶದರ್ ಪವಾರ್ ಸಭೆ ಕುರಿತು ಸಂಜಯ್ ರಾವತ್ ಮಾತನಾಡಿ, ಶರದ್ ಪವಾರ್ ಅವರ ನೇತೃತ್ವದಲ್ಲಿ ಸರ್ವಪಕ್ಷಗಳ ನಿಯೋಗ ರಚಿಸಿ ಮುನ್ನಡೆಸುವ ಸಾಧ್ಯತೆ ಬಗ್ಗೆ ಚರ್ಚಿಸಲಾಗಿದೆ. ರಾಜ್ಯದಲ್ಲಿ ಅಕಾಲಿಕ ಮಳೆಯಿಂದಾಗಿ ಮಹಾರಾಷ್ಟ್ರದಲ್ಲಿ ಅಪಾರ ಹಾನಿ ಸಂಭವಿಸಿದೆ. ವಿಪರೀತ ಬೆಳೆ ಹಾನಿಯಾಗಿದೆ. ಈ ಕುರಿತು ಚರ್ಚಿಸಲು ಸರ್ವ ಪಕ್ಷಗಳ ನಿಯೋಗ ರಚಿಸುವ ಬಗ್ಗೆ ಚರ್ಚಿಸಲಾಗಿದೆ ಎಂದು ಹೇಳಿದರು.
ಸರ್ಕಾರ ರಚಿಸಲಾಗದೆ ಕಂಗೆಟ್ಟಿರುವ ಶಿವಸೇನೆ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಲು ಪ್ರಾರಂಭಿಸಿದೆ. ಮಾತ್ರವಲ್ಲ, ನ್ಯಾಷನಲ್ ಕಾಂಗ್ರೆಸ್ ಪಕ್ಷ (ಎನ್ಸಿಪಿ) ಮುಖ್ಯಸ್ಥ ಶರದ್ ಪವಾರ್ ಅವರು ಕಾಂಗ್ರೆಸ್ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿಯವರನ್ನು ಭೇಟಿಯಾಗಿ ಚರ್ಚೆ ಕೂಡ ನಡೆಸಿದ್ದಾರೆ.