ಜೈಪುರ, ನ.19(Daijiworld News/SS): ಪ್ರಸ್ತುತ ಕಾಲಘಟ್ಟದಲ್ಲಿ ದೇಶದಲ್ಲಿ ಸಂಸ್ಕೃತದ ಶಾಸ್ತ್ರೀಯ ಭಾಷೆಯ ಮೇಲಿನ ಆಸಕ್ತಿ ಕ್ಷೀಣಿಸುತ್ತಿದೆ ಎಂಬ ಮಾತುಗಳು ಕೇಳುತ್ತಿರುವಾಗಲೇ, ಇಲ್ಲೊಂದು ಶಾಲೆ ಮಾದರಿಯಾಗಿದೆ. ಈ ಶಾಲೆ ಸಂಸ್ಕೃತವನ್ನು ಕಲಿಸುವುದರ ಮೂಲಕ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳನ್ನು ಆಕರ್ಷಿಸುತ್ತಿದೆ. ವಿಶೇಷವೆಂದರೆ, ಈ ಶಾಲೆಯಲ್ಲಿ ಹೆಚ್ಚಿನವರು ಮುಸ್ಲಿಂ ಸಮುದಾಯಕ್ಕೆ ಸೇರಿದವರಾಗಿದ್ದಾರೆ.
ವಾಸ್ತವವಾಗಿ, ಈ ವಿದ್ಯಾರ್ಥಿಗಳಲ್ಲಿ 80 ಪ್ರತಿಶತದಷ್ಟು ಮುಸ್ಲಿಮರಾಗಿದ್ದಾರೆ. ಈ ಶಾಲೆಯ ಮಕ್ಕಳು ವೈದಿಕ ಸಂಸ್ಕೃತ ಶ್ಲೋಕಗಳನ್ನು (ಪದ್ಯಗಳನ್ನು) ನಿರರ್ಗಳವಾಗಿ ಮತ್ತು ಅಧಿಕೃತವಾಗಿ ಪಠಿಸುತ್ತಾರೆ. ಮಾತ್ರವಲ್ಲ, ಅವರು ಸಂಸ್ಕೃತದಲ್ಲಿ ತಮ್ಮನ್ನು ಪರಿಚಯಿಸಿಕೊಳ್ಳುತ್ತಾರೆ. ಭಾರತದ ಪ್ರಾಚೀನ ಶಿಕ್ಷಣದ ಗುರುಕುಲ ವ್ಯವಸ್ಥೆಯ ಅನುಭವವನ್ನು ಈ ಶಿಕ್ಷಣ ಸಂಸ್ಥೆಯು ತೋರಿಸುತ್ತಿದೆ.
ಹತ್ತನೇ ತರಗತಿಯವರೆಗೆ ನಡೆಯುವ ಶಾಲೆಯಲ್ಲಿ ದಾಖಲಾದ 277 ವಿದ್ಯಾರ್ಥಿಗಳಲ್ಲಿ 222 ವಿದ್ಯಾರ್ಥಿಗಳು ಮುಸ್ಲಿಂ ಸಮುದಾಯಕ್ಕೆ ಸೇರಿದವರಿದ್ದಾರೆ. ಈ ಶಾಲೆಯ ಮತ್ತೊಂದು ಕುತೂಹಲಕಾರಿ ಅಂಶವೆಂದರೆ, ಹುಡುಗಿಯರು ಹುಡುಗರಿಗಿಂತ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ.
ಈ ಶಾಲೆಯನ್ನು 2004 ರಲ್ಲಿ ಮೊದಲು 8ನೇ ತರಗತಿಯವರೆಗೆ ನವೀಕರಿಸಲಾಯಿತು. ಆ ಸಮಯದಲ್ಲಿ, ಅದು ತನ್ನದೇ ಆದ ಕಟ್ಟಡವನ್ನು ಹೊಂದಿರಲಿಲ್ಲ. ಆದರೆ, ಸಂಸ್ಕೃತವನ್ನು ಕಲಿಯಲು ಮತ್ತು ಓದುವ ಮಕ್ಕಳ ಉತ್ಸಾಹವನ್ನು ನೋಡುತ್ತಾ, ಠಾಕೂರ್ ಹರಿಸಿಂಗ್ ಮಾಂಡವ ಅವರ ಮೊಮ್ಮಗ ಶಾಲೆಗೆ ಒಂದು ಜಮೀನನ್ನು ಕೊಟ್ಟಿದ್ದರು. ಬಳಿಕ, ಶಾಲೆಯ ಹೆಸರನ್ನು ರಾಜ್ಕಿಯಾ ಠಾಕೂರ್ ಹರಿ ಹರಿಸಿಂಗ್ ಶೇಖಾವತ್ ಮಂಡವಾ ಪ್ರವೇಶಿಕಾ ಸಂಸ್ಕೃತ ವಿದ್ಯಾಲಯ ಎಂದು ಬದಲಾಯಿಸಲಾಯಿತು.
ಈ ಶಾಲೆಯಲ್ಲಿ ಎಲ್ಲಾ ವಿಷಯಗಳನ್ನು ಕಲಿಸಲಾಗುತ್ತಿದ್ದರೂ, ಈ ಸಂಸ್ಥೆ ಹೆಚ್ಚಾಗಿ ಸಂಸ್ಕೃತಕ್ಕೆ ಒತ್ತು ನೀಡಿದೆ. ಈ ಬಗ್ಗೆ ಶಾಲೆಯ ಮುಖ್ಯೋಪಾಧ್ಯಾಯ ವೆಡ್ನಿಧಿ ಶರ್ಮಾ ಮಾತನಾಡಿದ್ದು, ವಿದ್ಯಾರ್ಥಿಗಳು ಸಂಸ್ಕೃತದ ಬಗ್ಗೆ ಸಾಕಷ್ಟು ಆಸಕ್ತಿ ಹೊಂದಿದ್ದಾರೆ. ಉತ್ತಮ ಶಾಲಾ ಸ್ಥಳಾವಕಾಶದೊಂದಿಗೆ ವಿದ್ಯಾರ್ಥಿಗಳ ಸಂಖ್ಯೆಯನ್ನು ಇನ್ನಷ್ಟೂ ಹೆಚ್ಚಿಸಬಹುದು ಎಂದು ಹೇಳಿದ್ದಾರೆ.