ಬೆಂಗಳೂರು, ನ 19 (Daijiworld News/MSP): ಸೂಕ್ತ ಪಾಸ್ ಇಲ್ಲವೆಂಬ ಕಾರಣಕ್ಕೆ 16 ವರ್ಷದ ವಿದ್ಯಾರ್ಥಿನಿಯನ್ನು ಕೆಎಸ್ಆರ್ಟಿಸಿ ಬಸ್ ನ ನಿರ್ವಾಹಕ ಚಲಿಸುತ್ತಿರುವ ಬಸ್ಸಿನಿಂದ ಹೊರಗೆ ತಳ್ಳಿದ ಅಮಾನವೀಯ ಘಟನೆ ಬೆಂಗಳೂರಿನ ಹೊರವಲಯದ ಕನಕಪುರದಲ್ಲಿ ನಡೆದಿದೆ.
ವಿದ್ಯಾರ್ಥಿನಿಯನ್ನು ಭೂಮಿಕಾ(16) ಎಂದು ಗುರುತಿಸಲಾಗಿದ್ದು ಈಕೆ ಬೆಂಗಳೂರಿನ ಯೆಲಚೇನಹಳ್ಳಿಯ ಜ್ಯೋತಿ ಕೇಂದ್ರೀಯ ವಿದ್ಯಾಲಯದ ವಿದ್ಯಾರ್ಥಿಯಾಗಿದ್ದಾಳೆ. " ನವೆಂಬರ್ 11 ರಂದು 3 ಗಂಟೆ ಸುಮಾರಿಗೆ ಮನೆಗೆ ಎಂದು ಕನಕಪುರ ಕಡೆಗೆ ಹೊರಟಿದ್ದ ಬಸ್ಗೆ ಭೂಮಿಕಾ ಏರಿದ್ದಳು. ಬಸ್ ಚಲಿಸಲು ಪ್ರಾರಂಭಿಸಿದಾಗ, ಕಂಡಕ್ಟರ್ ಅವಳನ್ನು ಬಳಿ ಬಂದು ಟಿಕೆಟ್ ಬಗ್ಗೆ ವಿಚಾರಿಸಿದ್ದಾನೆ. ಆಗ ಭೂಮಿಕಾ ತನ್ನ ಬಳಿ ಸ್ಟುಡೆಂಟ್ ಪಾಸ್ ಇದೆ ಎಂದಾಗ, ಸ್ಟುಡೆಂಟ್ ಪಾಸ್ ಈ ಬಸ್ನಲ್ಲಿ ಸ್ವೀಕರಿಸಲಾಗಿಲ್ಲ ಎಂದು ಕಂಡಕ್ಟರ್ ಹೇಳಿದ್ದಾರೆ. ಆಗ ಭೂಮಿಕಾ ಕಂಡಕ್ಟರ್ ಬಳಿ ಮುಂದಿನ ನಿಲ್ದಾಣದಲ್ಲಿ ಇಳಿಯುತ್ತೇನೆ ಎಂದಾಗ ನಿರ್ವಾಹಕ ನಿರಾಕರಿಸಿ ಚಲಿಸುತ್ತಿರುವ ಬಸ್ಸಿನಿಂದ ಹೊರಕ್ಕೆ ತಳ್ಳಿದ್ದಾನೆ" ಎಂದು ಪೊಲೀಸರು ತಿಳಿಸಿದ್ದಾರೆ.
ಭೂಮಿಕಾ ರಸ್ತೆ ಮೇಲೆ ಬಿದ್ದ ಪರಿಣಾಮ ಆಕೆಯ ಮುಖ, ಹಣೆಯ ಮತ್ತು ಎಡ ಮೊಣಕಾಲಿಗೆ ಗಾಯಗಳಾಗಿವೆ. ಈ ಪ್ರಕರಣದ ಬಗ್ಗೆ ಪ್ರತಿಕ್ರಿಯಿಸಿರುವ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಶಿವಯೋಗಿ ಕಳಸದ , ಪ್ರಕರಣಕ್ಕೆ ಸಂಬಂಧಿಸಿ ನಿರ್ವಾಹಕ ಶಿವಶಂಕರ್ ಅವರನ್ನು ಅಮಾನತು ಮಾಡಿ, ಇಲಾಖೆ ವಿಚಾರಣೆಗೆ ಆದೇಶಿಸಲಾಗಿದೆ ಎಂದು ತಿಳಿಸಿದ್ದಾರೆ.