ನವದೆಹಲಿ, ನ 19(Daijiworld News/MB): ರಸ್ತೆ ಬದಿ ಮಲಗಿರುವ ಗಾಯಗೊಂಡ ಕೋತಿಗೆ ಚಿಕಿತ್ಸೆಯ ಅಗತ್ಯವಿದೆ ಎಂದು ಟ್ವೀಟ್ ಮಾಡಿದ ಮಹಿಳೆಯೊಬ್ಬರಿಗೆ ತಕ್ಷಣ ಸ್ಪಂಧಿಸಿದ ಸಂಸದೆ ಮೇನಕಾ ಸಂಜಯ್ ಗಾಂಧಿ ಕೋತಿಯ ಚಿಕಿತ್ಸೆಗಾಗಿ ಕಾರು ಕಳುಹಿಸುತ್ತೇನೆ ಎಂದು ಹೇಳಿ ಟ್ವೀಟಿಗರಿಂದ ಪ್ರಶಂಸೆಗೆ ಒಳಗಾಗಿದ್ದಾರೆ.
"ನವ ದೆಹಲಿಯ ಪ್ರೆಸ್ ಕ್ಲಬ್ ಬಳಿ ಕೋತಿಯೊಂದು ಗಾಯಗೊಂಡು ಮಲಗಿದೆ. ಯಾವುದಾದರೂ ಎನ್ಜಿಒನವರು ಈ ಕೋತಿಯನ್ನು ಪ್ರಾಣಪಾಯದಿಂದ ಕಾಪಾಡಿ" ಎಂದು ಒಬ್ಬ ಮಹಿಳೆ ಟ್ವೀಟ್ ಮಾಡಿ ಮೇನಕಾ ಅವರಿಗೆ ಟ್ಯಾಗ್ ಮಾಡಿದ್ದಾರೆ.
ಇದಕ್ಕೆ ತಕ್ಷಣ ಸ್ಪಂಧಿಸಿದ ಮೇನಕಾರವರು "ಅವನನ್ನು ಚಿಕಿತ್ಸೆಗಾಗಿ ಪ್ರಾಣಿ ಸಂರಕ್ಷಣಾ ಕೇಂದ್ರಕ್ಕೆ ಕರೆದೊಯ್ಯಲು ಕಾರು ಕಳುಹಿಸುತ್ತೇನೆ. ಇನ್ನು ಕೆಲವೇ ನಿಮಿಷದಲ್ಲಿ ಕಾರು ಅಲ್ಲಿಗೆ ತಲುಪಲಿದೆ" ಎಂದು ಟ್ವೀಟ್ ಮಾಡಿದ್ದಾರೆ.
ಮೇನಕಾರವರು ಪೀಪಲ್ ಫಾರ್ ಅನಿಮಲ್ ಸಂಸ್ಥೆಯ ಸ್ಥಾಪಕರು ಹಾಗೂ ಪ್ರಾಣಿಗಳ ಹಕ್ಕು ಹೋರಾಟಗಾರರಾಗಿದ್ದು ತಮ್ಮ ಧನಾತ್ಮಕ ಸ್ಪಂಧನೆಯಿಂದ ಟ್ವೀಟಿಗರಿಂದ ಪ್ರಶಂಸೆ ಪಡೆದಿದ್ದಾರೆ.