ಚಿಕ್ಕಮಗಳೂರು, ನ.19(Daijiworld News/SS): ಹುಣಸೂರಿನಲ್ಲಿ ಕಾಂಗ್ರೆಸ್ ಅಭ್ಯರ್ಥಿ ದೊಡ್ಡ ಬಹುಮತದಿಂದ ಗೆಲ್ಲುತ್ತಾರೆ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷದಲ್ಲಿ ವಿಶ್ವನಾಥ್ ಅವರನ್ನು ಗೌರವದಿಂದ ನೋಡಿಕೊಂಡಿದ್ದೀವಿ. ಅವರು ಜೆಡಿಎಸ್ ಸೇರಿ ಶಾಸಕರಾದರು, ಈಗ ಬಿಜೆಪಿ ಸೇರಿದ್ದಾರೆ. ಅವರಿಗೆ ಯಾವ ಸಿದ್ದಾಂತ, ನೈತಿಕತೆ ಇದೆ ಎಂದು ಪ್ರಶ್ನಿಸಿದ್ದಾರೆ.
ವಿಶ್ವನಾಥ್ ಯಾವ ಕಾರಣಕ್ಕೆ ಬಿಜೆಪಿ ಸೇರಿದ್ದಾರೆ ಅನ್ನೋದು ರಾಜ್ಯಕ್ಕೆ ಗೊತ್ತು. ನಾನು ನೈತಿಕತೆ ಇಲ್ಲದವರ ಬಗ್ಗೆ ಹೆಚ್ಚು ಮಾತನಾಡುವುದಿಲ್ಲ. ವಿಶ್ವನಾಥ್ ಈ ಮಟ್ಟಕ್ಕೆ ಇಳಿದರಲ್ಲ ಎಂದು ನನಗೆ ತುಂಬಾ ನೋವಾಗುತ್ತೆ ಎಂದು ಬೇಸರ ವ್ಯಕ್ತಪಡಿಸಿದರು.
ಜೆಡಿಎಸ್ ಶಾಸಕ ಜಿ ಟಿ ದೇವೇಗೌಡ ಅವರ ಮನೆಗೆ ಅನರ್ಹ ಶಾಸಕ, ಹುಣಸೂರು ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎಚ್ ವಿಶ್ವನಾಥ್ ಭೇಟಿ ನೀಡಿದ ಹಿನ್ನಲೆ, ಈ ಹೇಳಿಕೆಯನ್ನು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ನೀಡಿದ್ದಾರೆ.