ತಿರುವನಂತಪುರ, ನ 19 (Daijiworld News/MSP): ಶಬರಿಮಲೆ ದೇವಸ್ಥಾನಕ್ಕೆ ತೆರಳಲು ಚಾರಣ ಆರಂಭಿಸಿದ್ದ 12 ವರ್ಷದ ಬಾಲಕಿಯನ್ನು ಕೇರಳ ಪೊಲೀಸರು ಮಂಗಳವಾರ ತಡೆದಿದ್ದಾರೆ.
ಬಾಲಕಿ ತನ್ನ ತಂದೆ ಮತ್ತು ಸಂಬಂಧಿಕರೊಂದಿಗೆ ಆಗಮಿಸಿದ್ದು ಅಯ್ಯಪ್ಪ ದೇವಸ್ಥಾನಕ್ಕೆ ಭೇಟಿ ನೀಡಬೇಕಿತ್ತು. ಆದರೆ ಬಾಲಕಿ ಚಾರಣ ಆರಂಭಿಸಿದ ವೇಳೆ ಬಾಲಕಿಯ ಹುಟ್ಟಿದ ವರ್ಷ ಹಾಗೂ ಇನ್ನಿತರೆ ದಾಖಲೆಗಳನ್ನು ಪರಿಶೀಲಿಸಿದ ಪೊಲೀಸರು ಆಕೆಗೆ ದೇಗುಲದೊಳಗೆ ಹೋಗಲು ಅನುಮತಿ ನಿರಾಕರಿಸಿದ್ದಾರೆ.
ಶಬರಿಮಲೆಗೆ ಋತುಮತಿಯಾಗುವ 10 ರಿಂದ 50 ವರ್ಷದೊಳಗಿನ ಮಹಿಳೆಯರಿಗೆ ಪ್ರವೇಶವಿಲ್ಲ. ಆದರೆ ಸುಪ್ರಿಂ ಕೋರ್ಟ್ 2018ರ ಸೆಪ್ಟೆಂಬರ್ 28 ರಂದು, ಶತಮಾನಗಳಷ್ಟು ಹಳೆಯದಾದ ನಿಷೇಧವನ್ನು ತೆಗೆದುಹಾಕಿ, ಎಲ್ಲ ವಯಸ್ಸಿನ ಮಹಿಳೆಯರಿಗೂ ಮುಕ್ತ ಅವಕಾಶವನ್ನು ಕಲ್ಪಿಸಿತ್ತು. ಇದು ಕೇರಳದಲ್ಲಿ ಸರಣಿ ಬೃಹತ್ ಪ್ರತಿಭಟನೆಗೆ ಸಾಕ್ಷಿಯಾಯಿತು.
ಆ ಬಳಿಕ ಶಬರಿಮಲೆ ಅಯ್ಯಪ್ಪಸ್ವಾಮಿ ದೇಗುಲಕ್ಕೆ ಮಹಿಳೆಯರ ಪ್ರವೇಶಕ್ಕೆ ಸಂಬಂಧಿಸಿದಂತೆ ಸಲ್ಲಿಕೆಯಾಗಿರುವ ಮರುಪರಿಶೀಲನಾ ಅರ್ಜಿ ಕುರಿತು ಸುಪ್ರೀಂಕೋರ್ಟ್ ನ.14ರಂದು ತನ್ನ ತೀರ್ಮಾನ ಪ್ರಕಟಿಸಿತ್ತು. ಈ ಪ್ರಕರಣವನ್ನು ಏಳು ಸದಸ್ಯರ ಪೀಠಕ್ಕೆ ವರ್ಗಾವಣೆ ಮಾಡಿ ಸುಪ್ರೀಂಕೋರ್ಟ್ ಆದೇಶ ಹೊರಡಿಸಿತ್ತು