ಹೈದರಾಬಾದ್, ನ 19(Daijiworld News/MB): ಮೂರು ಲಕ್ಷ ರೂಪಾಯಿ ಹಣ ವಸೂಲಿ ಮಾಡಲು 7 ವರ್ಷದ ಬಾಲಕನನ್ನು 10 ನೇ ತರಗತಿಯ ವಿದ್ಯಾರ್ಥಿ ಅಪಹರಣ ಮಾಡಿದ ಘಟನೆ ಹೈದರಾಬಾದ್ ನ ಮೀರ್ ಪೇಟ್ ನಲ್ಲಿ ನಡೆದಿದ್ದು, ಪೊಲೀಸರು 2 ಗಂಟೆಯಲ್ಲಿ ಬಾಲಕನ ರಕ್ಷಣೆ ಮಾಡಿ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬಾಲಕನ ತಂದೆ ಸಾಫ್ಟ್ ವೇರ್ ಇಂಜಿನಿಯರ್ ಜಿ.ರಾಜು ಅವರು ನನ್ನ ಮಗನನ್ನು ಅಪಹರಣ ಮಾಡಲಾಗಿದ್ದು, ಅಪಹರಣ ಮಾಡಿದ ವ್ಯಕ್ತಿ 3 ಲಕ್ಷ ರೂಪಾಯಿ ಹಣಕ್ಕಾಗಿ ಬೇಡಿಕೆ ಇಟ್ಟಿದ್ದು. ಹಣ ನೀಡದಿದ್ದಲ್ಲಿ ಹಾಗೂ ಪೊಲೀಸರಿಗೆ ಮಾಹಿತಿ ನೀಡಿದರೆ ಮಗನನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿದ್ದ ಎಂದು ಪೊಲೀಸರಿಗೆ ದೂರು ಸಲ್ಲಿಸಿದ್ದರು.
ಅಪಹರಣಕಾರನಿಗೆ ಬಾಲಕನ ತಂದೆ ಒಂದೂವರೆ ಲಕ್ಷ ರೂಪಾಯಿ ಕೊಡುವುದಾಗಿ ಮನವಿ ಮಾಡಿಕೊಂಡರೂ ಅವನು ಒಪ್ಪಿರಲಿಲ್ಲ. ಕೊನೆಗೆ 25 ಸಾವಿರ ರೂಪಾಯಿ ನಗದು ನೀಡಿ, ಉಳಿದ ಹಣಕ್ಕೆ ಚೆಕ್ ನೀಡುವುದಾಗಿ ಅಪಹರಣಕಾರನಿಗೆ ರಾಜುಅವರು ತಿಳಿಸಿದ್ದರು.
ಪೊಲೀಸರ ಸೂಚನೆ ಮೇರೆಗೆ ರಾಜು ಅವರು ಪ್ರತಿ 30 ನಿಮಿಷಕ್ಕೊಮ್ಮೆ ಅಪಹರಣಕಾರನಿಗೆ ಮೊಬೈಲ್ ಕರೆ ಮಾಡಿದ್ದು, ಪೊಲೀಸರು ಟವರ್ ಲೊಕೇಶನ್ ಪತ್ತೆ ಹಚ್ಚಿ ಅಪಹರಣಕಾರನನ್ನು ಬಂಧಿಸಿದ್ದರು.
ಈ ಸಂದರ್ಭದಲ್ಲಿ ಅಪಹರಣಕಾರ ಅಪ್ರಾಪ್ತ ಎಂದು ತಿಳಿದು ಪೊಲೀಸರು ಆಘಾತವಾಗಿದೆ.
ಆರೋಪಿಯನ್ನು ಬಾಲಪರಾಧಿ ಮಂಡಳಿ ಅಧಿಕಾರಿಗಳಿಗೆ ಒಪ್ಪಿಸಿರುವುದಾಗಿ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.