ಬೆಂಗಳೂರು, ನ.20(Daijiworld News/SS): ನಮಗೆ ಅವಕಾಶ ಇರುವ ಕ್ಷೇತ್ರಗಳಲ್ಲಿ ಗೆಲ್ಲುವುದು ನಮ್ಮ ಮೊದಲ ಆದ್ಯತೆ. ಉಳಿದ ಕಡೆ ಅನರ್ಹ ಶಾಸಕರನ್ನು ಸೋಲಿಸುವುದೇ ಮುಖ್ಯ ಗುರಿಯಾಗಿದ್ದು, ಅಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೆಲುವು ಸಾಧಿಸಲಿ ಅಂತಾ ಆಶಿಸುತ್ತೇನೆ ಎಂದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಕುಮಾರಸ್ವಾಮಿ, ಈ ಚುನಾವಣೆಗೆ ಪಕ್ಷ ತನ್ನದೇ ಆದ ಕಾರ್ಯತಂತ್ರ ರೂಪಿಸಲಿದೆ. ಅನರ್ಹ ಶಾಸಕರನ್ನು ಸೋಲಿಸುವುದೇ ನಮ್ಮ ಗುರಿ. ಅನರ್ಹ ಶಾಸಕರು ಸ್ಪರ್ಧಿಸಿರುವ ಕ್ಷೇತ್ರದಲ್ಲಿ ದೊಡ್ಡಮಟ್ಟದಲ್ಲಿ ಗೊಂದಲ ಹಾಗೂ ಭಿನ್ನಮತ ಇದೆ. ಬೆಳಗಾವಿಯ ಮೂರು ವಿಧಾನಸಭಾ ಕ್ಷೇತ್ರಗಳಲ್ಲೂ ಸಮರ್ಥ ಅಭ್ಯರ್ಥಿಯನ್ನು ಜೆಡಿಎಸ್ ಕಣಕ್ಕೆ ಇಳಿಸಿದೆ. ಅಥಣಿ ಅಭ್ಯರ್ಥಿ ನಮ್ಮ ಪಕ್ಷದ ಹಳೆ ಕಾರ್ಯಕರ್ತ. ಅವರಿಂದ ನಾಮಪತ್ರ ವಾಪಸ್ ಪಡೆಯುವುದಕ್ಕೆ ಲಕ್ಷ್ಮಣ ಸವದಿ ಅವರಿಂದ ಒತ್ತಡ ಹೇರಲಾಗುತ್ತಿದೆ ಎಂದು ದೂರಿದರು.
ಇದೇ ವೇಳೆ ಹಿರೇಕೆರೂರು ಕ್ಷೇತ್ರದಲ್ಲಿ ನಾವು ಪ್ರತ್ಯೇಕ ತಂತ್ರಗಾರಿಕೆ ನಡೆಸಿದ್ದೇವೆ ಎಂದ ಅವರು, ನಮ್ಮ ಪಕ್ಷದಿಂದ ಸ್ಪರ್ಧಿಸಿದ್ದ ಸ್ವಾಮೀಜಿಯವರ ಮೇಲೆ ಒತ್ತಡ ಹಾಕಲಾಗುತ್ತಿದೆ. ಸಿಎಂ ಯಡಿಯೂರಪ್ಪ, ಹಲವು ಮಠಾಧೀಶರು ಸ್ಪರ್ಧೆಯಿಂದ ಹಿಂದೆ ಸರಿಯುವಂತೆ ಹೇಳುತ್ತಿದ್ದಾರೆ. ಶ್ರೀಗಳನ್ನು ಅಜ್ಞಾತ ಸ್ಥಳದಲ್ಲಿಇಡಲಾಗಿದೆ ಎಂದು ಮಾಧ್ಯಮಗಳು ವರದಿ ಮಾಡುತ್ತಿವೆ. ಈ ಹಿನ್ನೆಲೆಯಲ್ಲಿ ಸ್ಪರ್ಧೆಯಿಂದ ಹಿಂದೆ ಸರಿಯುವಂತೆ ನಾನೇ ಸ್ವಾಮೀಜಿಗಳಿಗೆ ಮನವಿ ಮಾಡಿದ್ದೇನೆ ಎಂದು ಹೇಳಿದರು.