ಬೆಂಗಳೂರು, ನ.20(Daijiworld News/SS): ಇಡಿ ನೀಡಿರುವ ಸಮನ್ಸ್ ರದ್ದು ಮಾಡಿ ಬೆಂಗಳೂರಿನಲ್ಲಿ ವಿಚಾರಣೆ ನಡೆಸುವಂತೆ ಮಾಜಿ ಸಚಿವ ಡಿ.ಕೆ ಶಿವಕುಮಾರ್ ಅವರ ಪತ್ನಿ ಮತ್ತು ತಾಯಿ ಸಲ್ಲಿಸಿದ್ದ ಅರ್ಜಿ ಇಂದು ವಿಚಾರಣೆ ನಡೆಯಲಿದೆ.
ದೆಹಲಿ ಹೈ ಕೋರ್ಟಿನ ನ್ಯಾ. ಬ್ರಿಜೇಶ್ ಸೇಥಿ ನೇತೃತ್ವದ ಏಕ ಸದಸ್ಯ ಪೀಠ ಮಧ್ಯಾಹ್ನ 2:30ಕ್ಕೆ ವಿಚಾರಣೆ ನಡೆಸಲಿದ್ದು, ಡಿ.ಕೆ ಶಿವಕುಮಾರ್ ಆಪ್ತ ಸಹಾಯಕ ಆಂಜನೇಯ ಸಲ್ಲಿಸಿರುವ ಅರ್ಜಿಯನ್ನು ಈ ವೇಳೆ ವಿಚಾರಣೆ ನಡೆಸಲಿದೆ.
ಆಂಜನೇಯ ಅತ್ತೆ ಲಕ್ಷ್ಮಮ್ಮ, ಮಾವ ಹನುಮಂತಯ್ಯ ಸಂಬಂಧಿಗಳಾದ ಮೀನಾಕ್ಷಿ, ಜೈಶೀಲ ಅವರಿಗೂ ಇಡಿ ನೋಟಿಸ್ ನೀಡಿ ದೆಹಲಿ ಕಚೇರಿಗೆ ಬಂದು ಉತ್ತರಿಸುವಂತೆ ಸೂಚಿಸಿತ್ತು. ಈ ಸಮನ್ಸ್ ರದ್ದು ಮಾಡಿ ಬೆಂಗಳೂರಿನಲ್ಲಿ ವಿಚಾರಣೆ ನಡೆಸಲು ಇಡಿ ಅಧಿಕಾರಿಗಳಿಗೆ ಸೂಚಿಸುವಂತೆ ಅರ್ಜಿ ಸಲ್ಲಿಸಲಾಗಿತ್ತು.
ಉಷಾ ಮತ್ತು ಗೌರಮ್ಮ ಪರ ವಕೀಲರ ವಾದ ಮಂಡನೆ ಮುಕ್ತಾಯವಾದ ಹಿನ್ನೆಲೆ, ಇಂದು ಆಂಜನೇಯ ಅತ್ತೆ, ಮಾವನ ಪರ ವಕೀಲರು ವಾದ ಮಂಡಿಸಲಿದ್ದಾರೆ ಎಂದು ತಿಳಿದುಬಂದಿದೆ.