ಮುಂಬೈ, ನ.20(Daijiworld News/SS): ಜನಸಾಮಾನ್ಯರಿಗೆ ಈರುಳ್ಳಿ ಬೆಲೆ ಏರಿಕೆಯ ಹೊಡೆತ ಹೆಚ್ಚು ತಟ್ಟದಂತೆ ಕೇಂದ್ರ ಸರ್ಕಾರ ಈರುಳ್ಳಿ ರಫ್ತು ಮೇಲಿನ ನಿಷೇಧವನ್ನು ಫೆಬ್ರವರಿವರೆಗೂ ವಿಸ್ತರಿಸುವ ಸಾಧ್ಯತೆ ಇದೆ ಎನ್ನಲಾಗಿದೆ.
ಈರುಳ್ಳಿ ಬೆಳೆ ಹಾನಿಯಾಗಿರುವುದರಿಂದ ಪೂರೈಕೆಯಲ್ಲಿ ಕೊರತೆಯುಂಟಾಗಿ ಬೆಲೆ ಹೆಚ್ಚಳವಾಗಿದೆ. ಮಳೆಯಿಂದ ಬೆಳೆ ಹಾನಿಯಾಗಿದೆ. ಹೀಗಾಗಿ ಬೇಸಿಗೆ ಕಾಲದ ಬೆಳೆ ಬಿತ್ತನೆ ಮತ್ತು ಕೊಯ್ಲು ವಿಳಂಬವಾಗಲಿದೆ. ಈ ಹೊರೆಯನ್ನು ತಡೆದುಕೊಳ್ಳಲು ರಫ್ತು ನಿರ್ಬಂಧವನ್ನು ಮುಂದುವರಿಸಬಹುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮಹಾರಾಷ್ಟ್ರದಲ್ಲಿ ಭಾರಿ ಹಾನಿ ಈರುಳ್ಳಿ ಉತ್ಪಾದನೆಯಲ್ಲಿ ತೀವ್ರ ಕುಸಿತ ಉಂಟಾಗಿದ್ದರಿಂದ ದೇಶಿ ಮಾರುಕಟ್ಟೆಯಲ್ಲಿ ಒಂದು ಕೆ.ಜಿ. ಈರುಳ್ಳಿ ಬೆಲೆ 100 ರೂ. ಮುಟ್ಟಿತ್ತು. ಇದರಿಂದ ಬೆಲೆ ನಿಯಂತ್ರಿಸಲು ಹಾಗೂ ಬೇಡಿಕೆಗೆ ಅಗತ್ಯವಾದ ಈರುಳ್ಳಿ ಪೂರೈಸಲು ಸೆಪ್ಟೆಂಬರ್ನಲ್ಲಿ ಈರುಳ್ಳಿ ರಫ್ತಿನ ಮೇಲೆ ನಿಷೇಧ ಹೇರಲಾಗಿತ್ತು. ಆದರೂ ಭಾರಿ ಮಳೆ ಮತ್ತು ಪ್ರವಾಹದ ಬಳಿಕ ಅಕ್ಟೋಬರ್ ಮತ್ತು ನವೆಂಬರ್ನಲ್ಲಿ ಈರುಳ್ಳಿ ಸರಬರಾಜು ಸೀಮಿತಗೊಂಡಿರುವುದರಿಂದ ಈರುಳ್ಳಿ ಬೆಲೆ ಗಗನಕ್ಕೇರಿದೆ.
ಈರುಳ್ಳಿ ರಫ್ತುದಾರ ದೇಶವಾಗಿರುವ ಭಾರತ, ಏಷ್ಯಾದಲ್ಲಿನ ಈರುಳ್ಳಿ ದರವು ಏರಿಕೆಯಾಗುತ್ತಿರುವುದರಿಂದ ವಿದೇಶಿ ಮಾರುಕಟ್ಟೆಯಲ್ಲಿ ತನ್ನ ಬೆಳೆ ಮಾರಾಟವನ್ನು ನಿಷೇಧಿಸಿದೆ. ಇದರಿಂದ ನೇಪಾಳ, ಬಾಂಗ್ಲಾದೇಶ ಮತ್ತು ಶ್ರೀಲಂಕಾದ ಆಮದುದಾರರು ತಮ್ಮ ಬೇಡಿಕೆ ಈಡೇರಿಸಿಕೊಳ್ಳಲು ಇತರೆ ಮೂಲಗಳನ್ನು ಅವಲಂಬಿಸಿದೆ.