ಬೆಂಗಳೂರು, ನ.20(Daijiworld News/SS): ಸಚಿವ ಮಾಧುಸ್ವಾಮಿ ಪರವಾಗಿ ನಾನು ಸಮಾಜದ ಬಂಧುಗಳಲ್ಲಿ ಕ್ಷಮೆ ಯಾಚಿಸುತ್ತೇನೆ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತಾನಾಡಿದ ಅವರು, ಹೊಸದುರ್ಗದ ಕಾಗಿನೆಲೆ ಶ್ರೀಗಳ ವಿಚಾರದಲ್ಲಿ ಕೊಟ್ಟ ಹೇಳಿಕೆಯಲ್ಲಿ ತಪ್ಪು ಗ್ರಹಿಕೆಯಾಗಿದ್ದರೆ ವಿಷಾದ ವ್ಯಕ್ತಪಡಿಸುವುದಾಗಿ ಸಚಿವ ಮಾಧುಸ್ವಾಮಿ ಈಗಾಗಲೇ ಹೇಳಿದ್ದಾರೆ. ಅವರ ಪರವಾಗಿ ನಾನು ಮತ್ತೊಮ್ಮೆ ಸಮಾಜದ ಬಂಧುಗಳಲ್ಲಿ ಕ್ಷಮೆ ಯಾಚಿಸುತ್ತೇನೆ ಎಂದು ಸಿಎಂ ಹೇಳಿದರು.
ಈಗಾಗಲೇ ಸಚಿವ ಮಾಧುಸ್ವಾಮಿ ಹೇಳಿಕೆಯ ಕುರಿತು ಏನೇ ತಪ್ಪು ಗ್ರಹಿಕೆ ಇದ್ದರೂ ವಿಷಾದ ವ್ಯಕ್ತಪಡಿಸುವುದಾಗಿ ಹೇಳಿದ್ದಾರೆ. ಇದರಲ್ಲಿ ಗೊಂದಲ, ಅಪಾರ್ಥಕ್ಕೆ ಎಡೆ ಮಾಡಿಕೊಡುವುದು ಬೇಡ ಎಂದು ಹೇಳಿದರು.
ಕನಕವೃತ್ತ ಎಂದು ಹೆಸರಿಡಲು ಮಾಧುಸ್ವಾಮಿ ಒಪ್ಪಿಗೆ ನೀಡಿದ್ದಾರೆ. ಇದನ್ನು ಇಲ್ಲಿಗೆ ಕೊನೆ ಮಾಡಬೇಕು ಎಂದು ಎಲ್ಲರಲ್ಲೂ ಕೈ ಮುಗಿದು ಪ್ರಾರ್ಥಿಸುತ್ತೇನೆ ಎಂದು ವಿನಂತಿಸಿದ್ದಾರೆ.