ಬೆಳಗಾವಿ, ನ 20 (Daijiworld News/MB) :ಕೆಪಿಸಿಸಿ ಮಾಜಿ ಸದಸ್ಯ ಶಂಕರ ಮುನವಳ್ಳಿ ಇಂದು ಮುಂಜಾನೆ ನಿಧನಹೊಂದಿದ್ದಾರೆ. ಇವರು ಅನಾರೋಗ್ಯದಿಂದ ಬಳಲುತ್ತಿದ್ದರು.
ರಾಮದುರ್ಗದ ಶಂಕರ ಮುನವಳ್ಳಿಯವರು ಆರಂಭದಲ್ಲಿ "ಕನ್ನಡ ನಾಡು” ಪ್ರಾದೇಶಿಕ ಪಕ್ಷದಲ್ಲಿ ಗುರುತಿಸಿಕೊಂಡಿದ್ದು ನಂತರ ಕಾಂಗ್ರೆಸ್ ಪಕ್ಷಕ್ಕೆ ಸೇರಿಕೊಂಡಿದ್ದರು.
ಶಂಕರ ಮುನವಳ್ಳಿಯವರು 1989 ರ ಸುಮಾರಿಗೆ "ದಲಿತ ಧ್ವನಿ" ಸಾಪ್ತಾಹಿಕವನ್ನು ಆರಂಭಿಸಿದರು. ಅನೇಕ ಬಾರಿ ತಮ್ಮ ವಿರೋಧ ಮನೋಭಾವದಿಂದಲೇ ಬಂಡಾಯವೆದ್ದ ಕಾರಣಕ್ಕಾಗಿ ತಮ್ಮ ಸ್ಥಾನವನ್ನು ಕಳೆದುಕೊಂಡಿದ್ದಾರೆ.
ಇವರು 7 ನೇ ತರಗತಿ ವಿದ್ಯಾಭ್ಯಾಸ ಮಾಡಿದ್ದರು ಕಾನೂನಿನ ಬಗೆಗಿನ ಇವರ ಜ್ಞಾನ ಅಪಾರ. ಇವರು ಯಡಿಯೂರಪ್ಪರವರು ತಮ್ಮ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ್ದಾರೆ ಎಂದು ಕಾನೂನು ಬಾಗಿಲು ಬಡಿದು, ಮಾನಹಾನಿ ದೂರು ನೀಡಿದ್ದರು. ಇವರ ಕಾನೂನಿನ ಜ್ಞಾನ ಹಲವು ನಾಯಕರ ನಿದ್ದೆಗೆಡಿಸಿತ್ತು.