ಬೆಂಗಳೂರು, ನ.20(Daijiworld News/SS): ನಾನು ಕಾಂಗ್ರೆಸ್ಸಿನಲ್ಲಿ ಏಕಾಂಗಿಯಲ್ಲ. ಕಾಂಗ್ರೆಸ್ ಪಕ್ಷ ಯಾವತ್ತೂ ಯಾರನ್ನೂ ಏಕಾಂಗಿ ಮಾಡಲ್ಲ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಡಿಯೂರಪ್ಪರಿಗೆ ನಾನು ಏಕಾಂಗಿ ಆಗಬೇಕು ಅನಿಸಿರಬಹುದು. ಆದರೆ ಅವರ ಆಸೆ ಈಡೇರುವುದಿಲ್ಲ. ಕಾಂಗ್ರೆಸ್ ಪಕ್ಷ ಯಾವತ್ತೂ ಯಾರನ್ನೂ ಏಕಾಂಗಿ ಮಾಡಲ್ಲ ಎಂದು ಸ್ಪಷ್ಟಪಡಿಸಿದರು.
ಉಪಚುನಾವಣೆಯ ವಿಚಾರವಾಗಿ ಮಾತನಾಡಿದ ಅವರು, ನಮ್ಮ ಉದ್ದೇಶ ಅನರ್ಹರು ಸೋಲಬೇಕು. ಸಮ್ಮಿಶ್ರ ಸರ್ಕಾರ ಬೀಳಲು ಇವರೇ ಕಾರಣ. ಅದಕ್ಕಾಗಿ ಅವರು ಸೋಲಬೇಕು. ಈ ಮೂಲಕ ರಾಜ್ಯಾದ್ಯಂತ ಒಂದು ಸಂದೇಶ ರವಾನೆಯಾಗಬೇಕು. ಪಕ್ಷಾಂತರಿಗಳ ವಿರೋಧಿ ಸಂದೇಶ ರವಾನೆಯಾಗಬೇಕು. ಈ ವಿಚಾರವಾಗಿ ಕಾಂಗ್ರೆಸ್-ಜೆಡಿಎಸ್ ಇಬ್ಬರ ಉದ್ದೇಶವೂ ಒಂದೇ ಆಗಿದೆ. ಆದರೆ ಅವರ ದಾರಿ ಮತ್ತು ನಮ್ಮ ದಾರಿ ಒಂದೇ ಅಲ್ಲ ಎಂದು ಹೇಳಿದ್ದಾರೆ.
ಶ್ರೀರಾಮುಲು ಸವಾಲು ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಸಚಿವ ಶ್ರೀರಾಮುಲು ವೆರಿ ವೆರಿ ಪಾಪ್ಯುಲರ್ ಲೀಡರ್. ನಾನು ಅಷ್ಟು ಪಾಪ್ಯುಲರ್ ಅಲ್ಲ. ಅವರು ಯಾರ ಮೇಲಾದರೂ ತೊಡೆ ತಟ್ಟುತ್ತಾರೆ. ಆದರೆ ನಮಗೆ ಆ ರೀತಿ ತಟ್ಟಲು ಸಾಧ್ಯವಿಲ್ಲ ಎಂದು ವ್ಯಂಗ್ಯವಾಡಿದ್ದಾರೆ.