ನವದೆಹಲಿ, ನ 20 (Daijiworld News/MB) : ಅಮೆರಿಕದಲ್ಲಿದ್ದ ವೀಸಾ ನಿಯಮಾವಳಿಯನ್ನು ಉಲ್ಲಂಘಿಸಿ ಅಕ್ರಮ ವಲಸಿಗರು ಎನಿಸಿಕೊಂಡಿದ್ದ ಭಾರತದ 145 ಮಂದಿ ಭಾರತೀಯರನ್ನು ಅಮೆರಿಕ ಗಡೀಪಾರು ಮಾಡಿದ್ದು ಇವರನ್ನು ವಿಶೇಷ ವಿಮಾನದಲ್ಲಿ ಇಂದು ಬಾಂಗ್ಲಾದೇಶ ಮೂಲಕ ಭಾರತಕ್ಕೆ ಕಳುಹಿಸಲಾಗಿದ್ದು ದೆಹಲಿಯ ಇಂದಿರಾ ಗಾಂಧಿ ಅಂತರ್ ರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದು ಇಳಿಯಲಿದ್ದಾರೆ.
ಸ್ಥಳೀಯ ಅಂತರ್ ರಾಷ್ಟ್ರೀಯ ಏಜೆಂಟರು ಅಮೆರಿಕಕ್ಕೆ ಅಕ್ರಮ ವಿಧಾನದ ಮೂಲಕ ಪ್ರವೇಶ ನೀಡುವ ಭರವಸೆ ನೀಡದ ಹಿನ್ನೆಲೆಯಲ್ಲಿ ಅಮೆರಿಕಕ್ಕೆ ಬಂದಿದ್ದ ಇವರು ವೀಸಾ ನಿಯಮಾವಳಿಗಳನ್ನು ಉಲ್ಲಂಘಿಸಿ ಅಮೆರಿಕದಲ್ಲಿ ಅವಧಿ ಮೀರಿ ವಾಸ್ತವ್ಯ ಹೂಡಿದ್ದು, ಇವರನ್ನು ಗಡೀಪಾರು ಮಾಡಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಈ ವಿಮಾನದಲ್ಲಿ ಬಾಂಗ್ಲಾದೇಶ ಸೇರಿದಂತೆ ದಕ್ಷಿಣ ಏಷ್ಯಾದ ಕೆಲ ಪ್ರಜೆಗಳೂ ಇದ್ದು, ಗಡೀಪಾರಿಗೆ ಒಳಗಾದವರಲ್ಲಿ ಹೆಚ್ಚಿನ ಮಂದಿ 20 ರಿಂದ 35 ವರ್ಷ ವಯಸ್ಸಿನವರಾಗಿದ್ದಾರೆ. ಎಲ್ಲರಿಗೂ ತುರ್ತು ಪ್ರಮಾಣಪತ್ರಗಳನ್ನು ನೀಡಲಾಗಿದ್ದು, ಇದರ ಅನ್ವಯ ಇವರಿಗೆ ಅಮೆರಿಕದಿಂದ ಭಾರತಕ್ಕೆ ಏಕಮುಖ ಪ್ರಯಾಣ ಮಾತ್ರ ಮಾಡುವ ಅವಕಾಶವಿರುತ್ತದೆ ಎಂದು ವಿಮಾನ ನಿಲ್ದಾಣ ಅಧಿಕಾರಿಗಳು ತಿಳಿಸಿದ್ದಾರೆ.
ದೆಹಲಿ ವಿಮಾನ ನಿಲ್ದಾಣದಲ್ಲಿ ಗಡೀಪಾರಿಗೆ ಒಳಗಾದವರ ದಾಖಲೆಗಳನ್ನು ಪ್ರತ್ಯೇಕವಾಗಿ ದಾಖಲೆ ಮಾಡಲಾಗುತ್ತದೆ. 10-15 ಲಕ್ಷ ರೂಪಾಯಿ ನೀಡಿದರೆ ಅಮೆರಿಕ ಪ್ರವೇಶ ಮಾಡುವ ಅವಕಾಶ ನೀಡುವುದಾಗಿ ಅಂತರ್ ರಾಷ್ಟ್ರೀಯ ಏಜೆಂಟರು ಭರವಸೆ ನೀಡಿದ್ದರು. ಈ ಏಜೆಂಟರಿಗೆ ಯಾರು ನೆರವಾಗುತ್ತಿದ್ದಾರೆ ಎನ್ನುವುದರ ಕುರಿತು ಪತ್ತೆ ಹಚ್ಚಲಾಗುವುದು.
ಅಮೆರಿಕದಿಂದ ಅಕ್ಟೋಬರ್ 23ರಂದು117 ಭಾರತೀಯರನ್ನು ಗಡೀಪಾರು ಮಾಡಲಾಗಿತ್ತು.