ಬೆಂಗಳೂರು, ನ 20 (Daijiworld News/MSP): ರಾಜ್ಯದಲ್ಲಿ ತೀವ್ರ ಕುತೂಹಲ ಕೆರಳಿಸಿರುವ 15 ಕ್ಷೇತ್ರಗಳ ಉಪಚುನಾವಣೆ ಕಣ ರಂಗೇರಿದೆ. ನಾಯಕ ನಡುವಿನ ವಾಕ್ಸಮರ, ಆರೋಪ, ಪ್ರತ್ಯಾರೋಪ ಚುನಾವಣೆಯ ಕಾವು ಏರಿಸಿದೆ. ಈ ನಡುವೆ ಜೈಲಿನಿಂದ ಬಂದ ಬಳಿಕ ಡಿಕೆ ಶಿವಕುಮಾರ್ ದೇವಸ್ಥಾನಗಳಿಗೆ ಭೇಟಿ ನೀಡೋದರಲ್ಲಿ ಬ್ಯುಸಿ ಆಗಿದ್ದರೂ ಕೂಡಾ 15 ಕ್ಷೇತ್ರಗಳ ಪೈಕಿ 4 ಕ್ಷೇತ್ರಗಳ ಗೆಲುವಿಗಾಗಿ ದಾಳ ಉರುಳಿಸಿದ್ದಾರೆ ಎನ್ನಲಾಗಿದೆ.
ಮೈತ್ರಿ ಸರ್ಕಾರದ ಪತನಕ್ಕೆ ಪ್ರಮುಖವಾಗಿ ಕಾರಣದ ಎಂ.ಟಿ.ಬಿ.ನಾಗರಾಜ್, ರಮೇಶ್ ಜಾರಕಿಹೊಳಿ, ಎಸ್.ಟಿ. ಸೋಮಶೇಖರ್ ಹಾಗೂ ಸುಧಾಕರ್ ಅವರನ್ನು ಶತಾಯಗತಾಯ ಸೋಲಿಸಲು ಟ್ರಬಲ್ ಶೂಟರ್ ಪಣ ತೊಟ್ಟಿದ್ದಾರೆ ಎನ್ನಲಾಗಿದ್ದು, ಈ ನಾಲ್ಕು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆಲುವಿಗಾಗಿ ಈಗಾಗಲೇ ಹಲವು ತಂತ್ರಗಳನ್ನು ರೂಪಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಇದಕ್ಕಾಗಿ ಒಂದೊಂದು ಕ್ಷೇತ್ರದಲ್ಲೂ ಡಿಕೆ ಶಿವಕುಮಾರ್ ಅವರ 50 ಜನರ ಟೀಂ ಕೆಲಸ ಮಾಡುತ್ತಿದ್ದು, ಕ್ಷೇತ್ರದಲ್ಲಿ ನಡೆಯುವ ಬೆಳವಣಿಗೆಗಳ ಬಗ್ಗೆ ಪ್ರತಿ ಮಾಹಿತಿಯೂ ಟ್ರಬಲ್ ಶೂಟರ್ ಅವರಿಗೆ ತಲುಪುತ್ತಿದೆ.