ತಿರುವನಂತಪುರಂ, ನ 20 (Daijiworld News/MB) : ಕೇರಳದ 105 ವರ್ಷದ ಅಜ್ಜಿ 4ನೇ ತರಗತಿ ಪರೀಕ್ಷೆಗೆ ಹಾಜರಾಗಿ ಜನರೆಲ್ಲಾ ಆಶ್ಷರ್ಯದಿಂದ ನೋಡುವಂತೆ ಮಾಡಿದ್ದು ಕೇರಳ ಸಾಕ್ಷರತಾ ಮಿಷನ್ ಅಂಗವಾಗಿ ಶಿಕ್ಷಣ ಪಡೆದ ಅತ್ಯಂತ ಹಿರಿಯ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
105 ವರ್ಷದ ಭಾಗೀರಥಿ ಅಮ್ಮ ರಾಜ್ಯ ಸಾಕ್ಷರತಾ ಆಯೋಗ ನಡೆಸುವ ನಾಲ್ಕನೇ ತರಗತಿ ತತ್ಸಮಾನ ಪರೀಕ್ಷೆಯನ್ನು ಕೊಲ್ಲಂ ನಗರದ ತಮ್ಮ ನಿವಾಸದಲ್ಲಿಯೇ ಬರೆದಿದ್ದಾರೆ.
ಈ ಅಜ್ಜಿಗೆ ಬಾಲ್ಯದಲ್ಲಿಯೇ ವಿದ್ಯಾಭಾಸದಲ್ಲಿ ಅತೀವ ಆಸಕ್ತಿ ಇದ್ದರೂ ಅವರ ತಾಯಿ ಅವರು ಚಿಕ್ಕಂದರಲ್ಲೇ ಮೃತಪಟ್ಟ ಕಾರಣ ಸೋದರ ಸೋದರಿಯರನ್ನು ನೋಡಿಕೊಳ್ಳುವ ಜವಾಬ್ದಾರಿ ಹೊರಬೇಕಾಯಿತು. ಹಾಗಾಗಿ ಅವರ ವಿದ್ಯಾಭ್ಯಾಸ ಪಡೆಯುವ ಆಸೆ ಈಡೇರಲಿಲ್ಲ.
ಮದುವೆಯಾದ ಇವರಿಗೆ ಆರು ಮಕ್ಕಳು ಇದ್ದು ಪತಿಯನ್ನು ಕೂಡಾ ಬಲುಬೇಗನೆ ಕಳೆದುಕೊಆಂಡಿದ್ದಾರೆ.
ಭಾಗೀರಥಿ ಅಮ್ಮ ಅವರಿಗೆ ಬರೆಯಲು ಕಷ್ಟವಾದ ಕಾರಣ ಅವರ ಕಿರಿಯ ಪುತ್ರಿ ಸಹಾಯದಿಂದ ಪರೀಕ್ಷೆ ಬರೆಯಲಾಗಿದ್ದು, ಪರಿಸರ,ಗಣಿತ ಮತ್ತು ಮಲಯಾಳಂ ಪ್ರಶ್ನೆ ಪತ್ರಿಕೆಗಳಿಗೆ ಉತ್ತರಿಸಲು ಮೂರು ದಿನ ಕಾಲ ತೆಗೆದುಕೊಂಡಿದ್ದಾರೆ.
ಅವರಿಗೆ 105 ವಯಸ್ಸಾಗಿದ್ದರೂ ಅವರ ಜ್ಞಾಪಕ ಶಕ್ತಿ ಉತ್ತಮವಾಗಿದೆ. ಆದರೆ ಆಧಾರ್ ಕಾರ್ಡ್ ಇಲ್ಲದ ಇವರಿಗೆ ವೃದ್ದಾಪ್ಯ ಮತ್ತು ವಿಧವಾ ವೇತನ ಬರುವುದಿಲ್ಲ ಎಂಬುವುದು ಆ ಅಜ್ಜಿಯ ಕೊರಗು.