ನವದೆಹಲಿ, ನ 20 (Daijiworld News/MB) : ಜಮ್ಮು ಮತ್ತು ಕಾಶ್ಮೀರದಲ್ಲಿ ಅಂತರ್ಜಾಲ ಸೇವೆ ಸ್ಥಗಿತಗೊಳಿಸಿರುವುದನ್ನು ಸಮರ್ಥನೆ ಮಾಡಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಕಾಶ್ಮೀರದಲ್ಲಿ ಕರ್ಫ್ಯೂ ಜಾರಿಯಲಿಲ್ಲ, ಕಾಶ್ಮೀರ ಸಹಜ ಸ್ಥಿತಿಗೆ ಮರಳುತ್ತದೆ ಎಂದು ರಾಜ್ಯ ಸಭೆಯಲ್ಲಿ ಹೇಳಿದ್ದಾರೆ.
ಕಾಶ್ಮೀರದಲ್ಲಿ ಹೇರಿರುವ ಅಂತರ್ಜಾಲ ಸೇವೆ ಸ್ಥಗಿತದ ಕ್ರಮವನ್ನು ಸಮರ್ಥಿಸಿ ಪಾಕಿಸ್ತಾನದ ಕುಮ್ಮಕ್ಕಿನಿಂದ ಕಾಶ್ಮೀರದಲ್ಲಿ ಕೆಲವು ಚಟುವಟಿಕೆಗಳು ನಡೆಯುತ್ತಿದೆ. ಅಂತರ್ಜಾಲ ಮರು ಆರಂಭಿಸುವ ಕುರಿತು ಸಂದರ್ಭ ನೋಡಿ ಕಾಶ್ಮೀರದ ಆಡಳಿತವೇ ನಿರ್ಧಾರ ಕೈಗೊಳ್ಳುತ್ತದೆ ಎಂದು ಅವರು ತಿಳಿಸಿದ್ದಾರೆ.
ಕಾಶ್ಮೀರ ಈಗ ಸಹಜ ಸ್ಥಿತಿಗೆ ಮರಳಿದೆ. ಎಲ್ಲಾ ಉರ್ದು ಹಾಗೂ ಇಂಗ್ಲೀಷ್ ಪತ್ರಿಕೆಗಳು, ಟಿವಿ ಮಾಧ್ಯಮಗಳು ಕಾರ್ಯನಿರ್ವಹಿಸುತ್ತಿವೆ. ದಿನಪತ್ರಿಕೆ, ಟಿವಿ ಹಾಗೂ ಬ್ಯಾಂಕ್ ಸೇವೆಗಳು ಕೂಡಾ ಪುನರ್ ಆರಂಭಗೊಂಡಿದೆ. ಸರ್ಕಾರಿ ಕಚೇರಿಗಳು, ನ್ಯಾಯಾಲಯಗಳು, ಚುನಾವಣಾ ಕಾರ್ಯಗಳು ನಡೆಯುತ್ತಿವೆ. ಎಲ್ಲಾ ಸೇವೆಗಳು ಚಾಲ್ತಿಯಲ್ಲಿದೆ ಎಂದು ಹೇಳಿದ್ದಾರೆ.
ಈ ವಿಚಾರದ ಕುರಿತು ಎಷ್ಟುಹೊತ್ತು ಬೇಕಾದರೂ ನಾನು ಚರ್ಚೆ ಮಾಡಲು ತಯಾರಿದ್ದೇನೆ. ನಾನು ಈಗ ತಿಳಿಸಿರುವ ವಿಚಾರದ ಕುರಿತು ಗುಲಾಂ ನಬಿ ಆಜಾದ್ ಅವರು ಸವಾಲು ಮಾಡಲಿ. ನೀವು ಈ ದಾಖಲೆಗಳಿಗೆ ಯಾಕೆ ವಿರೋಧ ಮಾಡುತ್ತಿಲ್ಲ ಎಂದು ಕಾಂಗ್ರೆಸ್ ಗೆ ಪ್ರಶ್ನಿಸಿದರು.