ನಾಗಪಟ್ಟಣಂ, ನ 20 (Daijiworld News/MSP): ದಲಿತ ಯುವಕನೊಂದಿಗಿನ ಸಂಬಂಧ ಹೊಂದಿದ್ದಾಳೆಂಬ ಸಿಟ್ಟಿನಲ್ಲಿ ತಾಯಿಯೊಬ್ಬಳು 17 ವರ್ಷದ ಮಗಳನ್ನು ಬೆಂಕಿ ಹಚ್ಚಿ ಸಜೀವವಾಗಿ ದಹಿಸಿ ತಾನು ಬೆಂಕಿ ಹಚ್ಚಿಕೊಂಡ ಘಟನೆ ಮಂಗಳವಾರ ತಮಿಳುನಾಡಿನ ನಾಗಪಟ್ಟಣಂ ಜಿಲ್ಲೆಯಲ್ಲಿ ನಡೆದಿದೆ. ತೀವ್ರ ಸುಟ್ಟ ಗಾಯಗಳಿಂದ ಮಗಳು ಸಾವನ್ನಪ್ಪಿದರೆ ತಾಯಿ ಆಸ್ಪತ್ರೆಯಲ್ಲಿ ಜೀವನ್ಮರಣ ಸ್ಥಿತಿಯಲ್ಲಿ ಹೋರಾಡುತ್ತಿದ್ದಾರೆ.
ಹಿಂದುಳಿದ ಸಮುದಾಯದಿಂದ ಬಂದಿದ್ದ ಮೃತ ಯುವತಿ ಜನನಿ ಪಿಯುಸಿ ವಿದ್ಯಾರ್ಥಿನಿಯಾಗಿದ್ದು, ತಂದೆ ಕಣ್ಣನ್ ಬಡಗಿಯಾಗಿ ಕೆಲಸ ಮಾಡುತ್ತಿದ್ದರೆ ತಾಯಿ ಉಮಾ ಮಹೇಶ್ವರ್ ದಿನಗೂಲಿ ಕಾರ್ಮಿಕೆಯಾಗಿದ್ದಳು. ಜನನಿ ತನ್ನದೇ ವಾಝಮಂಗಲಂ ಗ್ರಾಮದ ದಲಿತ ಯುವಕನೊಂದಿಗೆ ಸಂಬಂಧ ಹೊಂದಿದ್ದು, ಈ ಹಿಂದೆ ಆತನೊಂದಿಗೆ ಹೋಗಲು ಯತ್ನಿಸಿದಾಗ ಆಕೆಯ ಹೆತ್ತವರು ಮರಳಿ ಕರೆತಂದಿದ್ದರು.
ಆದಾಗ್ಯೂ, ಇದೇ ವಿಚಾರವಾಗಿ ತಾಯಿ ಮಗಳೊಂದಿಗೆ ವಾಗ್ವಾದವಾಗಿದೆ. ಈ ತಿಂಗಳ ಕೊನೆಯಲ್ಲಿ 18 ವರ್ಷ ತುಂಬುವುದರಿಂದ ನನ್ನನ್ನು ತಡೆಯಲು ಸಾಧ್ಯವಿಲ್ಲ ಎಂದು ತಾಯಿಗೆ ಜನನಿ ತಿಳಿಸಿದ್ದಾಳೆ. ಇದರಿಂದ ಕೋಪಗೊಂಡ ಉಮಾ ಮಗಳು ಜನನಿಯ ಮೇಲೆ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿ ಬಳಿಕ ತಾನು ಬೆಂಕಿ ಹಚ್ಚಿಕೊಂಡಿದ್ದಾಳೆ. ಜನನಿ ಸಾವನ್ನಪಿದರೆ ತಾಯಿ ಸ್ಥಿತಿ ಚಿಂತಾಜನಕವಾಗಿದೆ ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ.
ಘಟನೆ ನಡೆದ ಬಳಿಕ ನೆರೆಹೊರೆಯವರು ಮತ್ತು ಸಂಬಂಧಿಕರು ಪೊಲೀಸರಿಗೆ ನೀಡಿದ್ದಾರೆ ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ದಲಿತ ಯುವಕರನ್ನು ತನಿಖೆಗೆ ಒಳಪಡಿಸಳಾಗಿದೆಯೇ ಎಂಬ ಪ್ರಶ್ನೆಗೆ ಆತನಿಗೂ ಈ ಕೊಲೆಗೂ ಯಾವುದೇ ಸಂಬಂಧವಿರಲಿಲ್ಲ. ಹೀಗಾಗಿ ಆತನ ವಿಚಾರಣೆ ಅಗತ್ಯವಿಲ್ಲ ಪೊಲೀಸರು ತಿಳಿಸಿದ್ದಾರೆ.
ಈ ಕುರಿತು ತಿತ್ತಚೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಯುವತಿ ಮತ್ತು ತಾಯಿಯನ್ನು ಚಿಕಿತ್ಸೆಗಾಗಿ ನಾಗಪಟ್ಟಣಂ ಸರ್ಕಾರಿ ಆಸ್ಪತ್ರೆಗೆ ಸಾಗಿಸಲಾಗಿದೆ. ಪೊಲೀಸರು ತಾಯಿಯ ವಿರುದ್ಧ ಕೊಲೆ ಕೇಸ್ ದಾಖಲಿಸಿದ್ದಾರೆ. ಪೂರ್ವಯೋಜಿತ ಕೃತ್ಯವೇ ಎಂದು ಯುವತಿಯ ತಂದೆಯನ್ನು ತನಿಖೆ ಒಳಪಡಿಸಲಾಗುವುದು ಎಂದು ತಿಳಿಸಿದ್ದಾರೆ.