ಬೆಂಗಳೂರು, ನ 20 (Daijiworld News/MB) : ಹೊಸಕೋಟೆಯಲ್ಲಿ ಉಪಚುನಾವಣೆಯ ಪ್ರಚಾರದಲ್ಲಿರುವ ಹೊಸಕೋಟೆ ಬಿಜೆಪಿ ಅಭ್ಯರ್ಥಿ ಎಂಟಿಬಿ ನಾಗರಾಜ್ ಕಾಂಗ್ರೆಸ್ ವಿರುದ್ಧ ಕಿಡಿಕಾರಿದ್ದು, "ಕಾಂಗ್ರೆಸ್ ನ ಹಿರಿಯ ನಾಯಕರೇ ನನ್ನ ಬಳಿ ಸಾಲ ಪಡೆದಿದ್ದು ಇನ್ನೂ ವಾಪಾಸ್ ಮಾಡಿಲ್ಲ" ಎಂದು ಹೇಳಿದ್ದಾರೆ.
"ನಾನು ಯಾರ ಹಂಗಿನಲ್ಲೂ ಇಲ್ಲ. ಬದಲಾಗಿ ಕಾಂಗ್ರೆಸ್ ನಾಯಕರಿದ್ದಾರೇ ನನ್ನ ಋಣದಲ್ಲಿದ್ದಾರೆ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಎಚ್ ಮುನಿಯಪ್ಪ, ನಂಜೇಗೌಡ ಮತ್ತು ನಾರಾಯಣಸ್ವಾಮಿ ಅವರು ನನ್ನಿಂದ ಹಣ ಪಡೆದಿದ್ದು ಇಂದಿಗೂ ವಾಪಸ್ ಕೊಟ್ಟಿಲ್ಲ" ಎಂದು ಹೇಳಿದ್ದಾರೆ.
"ಇಂದು ನನ್ನನ್ನು ಸೋಲಿಸಲು ನನ್ನ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವ ಇವರು ನನ್ನಿಂದಲೇ ಸಾಲ ಪಡೆದವರು. ಮಾಜಿ ಸಚಿವ ಕೃಷ್ಣಬೈರೇಗೌಡ ಸಹ ಲೋಕಸಭೆ ಚುನಾವಣೆ ಸಂದರ್ಭದಲ್ಲಿ ನನ್ನಿಂದ ಸಾಲ ಪಡೆದುಕೊಂಡಿದ್ದು ವಾಪಾಸ್ ನೀಡಿದ್ದಾರೆ. ಇವರನ್ನು ಬಿಟ್ಟರೆ ಬೇರೆ ಯಾವ ಕಾಂಗ್ರೆಸ್ ನಾಯಕರು ಸಾಲ ವಾಪಾಸ್ ಮಾಡಿಲ್ಲ" ಎಂದು ಕಾಂಗ್ರೆಸ್ ನಾಯಕರ ವಿರುದ್ಧ ಮಾತಾನಾಡಿದರು.
"ನಾನು ಧರ್ಮಸ್ಥಳ ಮಂಜುನಾಥ ಸ್ವಾಮಿ ಭಕ್ತ, ಸುಳ್ಳು ಹೇಳುವುದಿಲ್ಲ, ನಾನು 1200 ಕೋಟಿಗೆ ಒಡೆಯನಾಗಿದ್ದು ಈ ಎಲ್ಲಾ ಆಸ್ತಿಯನ್ನು ನ್ಯಾಯವಾಗಿ ಸಂಪಾದಿಸಿದ್ದೇನೆ" ಎಂದು ತಿಳಿಸಿದ್ದಾರೆ.