ಬೆಂಗಳೂರು, ನ 20 (DaijiworldNews/SM): ರಾಜ್ಯದಲ್ಲಿ ನಡೆಯಲಿರುವ ಉಪಚುನಾವಣೆಯ ಎಲ್ಲಾ ಕ್ಷೇತ್ರಗಳನ್ನು ಆಡಳಿತದಲ್ಲಿರುವ ಬಿಜೆಪಿ ಪಕ್ಷ ಗೆಲ್ಲಲಿದೆ ಎಂದು ಕಂದಾಯ ಸಚಿವ ಆರ್. ಅಶೋಕ್ ತಿಳಿಸಿದ್ದಾರೆ. ಬಿಜೆಪಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಈಗಾಗಲೇ ಸಿಎಂ ಬಿಎಸ್ ವೈ ಹಾಗೂ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರ ನೇತೃತ್ವದಲ್ಲಿ ಕ್ಷೇತ್ರಗಳ ಪ್ರಮುಖರೊಂದಿಗೆ ಸಭೆ ನಡೆಸಿ ಚರ್ಚಿಸಲಾಗಿದೆ ಎಂದರು.
ಸಭೆಯಲ್ಲಿ ಭಾಗವಹಿಸಲು ಎಲ್ಲಾ ಕ್ಷೇತ್ರಗಳಿಂದ ಪ್ರಮುಖ ನಾಯಕರು ಆಗಮಿಸಿದ್ದರು. 3-4 ಪ್ರಮುಖ ಮುಖಂಡರು ಸಭೆಯಲ್ಲಿ ಭಾಗವಹಿಸಿದ್ದರು. ಸಭೆಯಲ್ಲಿ ಪ್ರಚಾರದ ಕುರಿತಂತೆ ಸಂಪೂರ್ಣವಾಗಿ ಚರ್ಚೆ ನಡೆಸಲಾಗಿದೆ ಎಂದರು. ಇನ್ನು ಯಾವ ರೀತಿಯಲ್ಲಿ ಪ್ರಚಾರ ನಡೆಸಬೇಕು ಮತ್ತು ಪ್ರಚಾರ ಕಾರ್ಯ ಯಾವಾಗ ಆರಂಭಿಸಬೇಕೆನ್ನುವ ಕುರಿತಂತೆಯೂ ಕೂಡ ಚರ್ಚೆ ನಡೆಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಇನ್ನು ಉಪಸಮರ ನಡೆಯುವ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಗೆಲ್ಲಿಸುವ ಹೊಣೆ ಕ್ಷೇತ್ರಕ್ಕೆ ನೀಮಿಸಿರುವ ಉಸ್ತುವಾರಿಗಳದ್ದಾಗಿದೆ. ಈಗ ಬಂದಿರುವ ವರದಿಯಲ್ಲಿ ಬಿಜೆಪಿ ಮುಂದಿದೆ ಎಂದು ಸ್ಪಷ್ಟಪಡಿಸಿದರು. ಎಲ್ಲಾ ಕ್ಷೇತ್ರಗಳಲ್ಲೂ ನಮಗೆ ಉತ್ತಮ ಬೆಂಬಲ ದೊರಕಿದೆ. ಕೆಲವು ಕ್ಷೇತ್ರಗಳಲ್ಲಿ ನಾಮಪತ್ರ ಸಲ್ಲಿಕೆ ಸಂದರ್ಭದಲ್ಲೇ ಇದು ಸಾಬೀತಾಗಿದೆ ಎಂದರು. ಈ ಹಿನ್ನೆಲೆಯಲ್ಲಿ ಉಪಸಮರದಲ್ಲಿ ಜನ ಬಿಜೆಪಿಗೆ ಆಶೀರ್ವಾದ ನೀಡಲಿದ್ದಾರೆ ಎಂಬ ವಿಶ್ವಾಸವನ್ನು ಕಂದಾಯ ಸಚಿವ ಆರ್. ಅಶೋಕ್ ವ್ಯಕ್ತಪಡಿಸಿದ್ದಾರೆ.