ಕಾಸರಗೋಡು, ನ 20 (DaijiworldNews/SM): ಚಿನ್ನದ ವ್ಯಾಪಾರಿಯಾಗಿದ್ದ ಮನ್ಸೂರ್ ಅಲಿ(55) ಎಂಬವರನ್ನು ಕೊಲೆಗೈದು ಬಾವಿಗೆಸೆದ ಘಟನೆಗೆ ಸಂಬಂಧಪಟ್ಟಂತೆ ಆರೋಪಿಗಳಿಗೆ ಶಿಕ್ಷೆ ವಿಧಿಸಿ ಕಾಸರಗೋಡು ಜಿಲ್ಲಾ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯ ಬುಧವಾರ ತೀರ್ಪು ನೀಡಿದೆ.
ಎರಡನೇ ಆರೋಪಿ ಬಂಟ್ವಾಳ ಕರುವತ್ತಡ್ಕ ಮಿತ್ತನಡ್ಕದ ಅಬ್ದುಲ್ ಸಲಾಂ(30) ಎಂಬಾತನಿಗೆ ಜೀವಾವಧಿ ಶಿಕ್ಷೆ ಮತ್ತು ೭೫ ಸಾವಿರ ರೂಪಾಯಿ ದಂಡ, ಮೂರನೇ ಆರೋಪಿ ಹಾಸನದ ರಂಗಣ್ಣನಿಗೆ ಮೂರು ವರ್ಷ ಕಠಿಣ ಸಜೆ ಮತ್ತು 25 ಸಾವಿರ ರೂಪಾಯಿ ದಂಡ ವಿಧಿಸಿ ತೀರ್ಪು ನೀಡಿದೆ. ಪ್ರಕರಣದ ಪ್ರಮುಖ ಆರೋಪಿ ಮಾರಿಮುತ್ತು ಯಾನೆ ಮುಹಮ್ಮದ್ ಅಶ್ರಫ್(45) ಜಾಮೀನಿನಲ್ಲಿ ಬಿಡುಗಡೆಗೊಂಡು ತಲೆಮರೆಸಿಕೊಂಡಿದ್ದಾನೆ. ಈತನ ಪತ್ತೆಗೆ ಶೋಧ ಕಾರ್ಯ ಮುಂದುವರೆಸಲಾಗಿದೆ.
ಪ್ರಕರಣದ ಹಿನ್ನೆಲೆ:
ಇನ್ನು ಕಾಸರಗೋಡು ಚಟ್ಟಂಗುಯಿ ನಿವಾಸಿಯಾಗಿದ್ದ ಮನ್ಸೂರ್ ರನ್ನು ಹಳೆ ಚಿನ್ನಾಭರಣ ಮಾರಾಟ ಮಾಡುವ ನೆಪದಲ್ಲಿ ಆರೋಪಿಗಳು ಪೈವಳಿಕೆ ಸಮೀಪದ ಬಾಯಾರುಪದವಿಗೆ ವ್ಯಾನ್ ನಲ್ಲಿ ಕರೆದೊಯ್ದು ಕಣ್ಣಿಗೆ ಮೆಣಸಿಗೆ ಹುಡಿ ಎರಚಿ ತಲೆಗೆ ಬಡಿದು ಕೊಲೆಗೈದಿದ್ದರು. ಬಳಿಕ ಸಮೀಪದ ಬಾವಿಗೆ ಎಸೆದಿದ್ದರು. ಮನ್ಸೂರು ಅಲಿಯವರಲ್ಲಿದ್ದ 2.40 ಲಕ್ಷ ರೂಪಾಯಿ ನಗದು, ಮೊಬೈಲನ್ನು ಆರೋಪಿಗಳು ಕಳವು ಮಾಡಿದ್ದರು. 2017ರ ಜನವರಿ 25ರಂದು ಕೊಲೆ ನಡೆದಿತ್ತು. ಮಂಜೇಶ್ವರ ಠಾಣಾ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.