ಬೆಂಗಳೂರು, ನ.21(Daijiworld News/SS): ಮೂರುವರೆ ವರ್ಷಗಳ ಕಾಲ ಅಧಿಕಾರದಲ್ಲಿ ಮುಂದುವರಿಯಬೇಕಾದರೆ ಈ ಚುನಾವಣೆ ಅಗ್ನಿಪರೀಕ್ಷೆಯಾಗಿದೆ. ಉಪ ಚುನಾವಣೆಯ ಫಲಿತಾಂಶದಲ್ಲಿ ಎಲ್ಲರ ಭವಿಷ್ಯ ಅಡಗಿದೆ. ಹೀಗಾಗಿ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಂಡು ಬನ್ನಿ ಎಂದು ಸಿಎಂ ಯಡಿಯೂರಪ್ಪ ಸಚಿವರಿಗೆ ಆದೇಶಿಸಿದ್ದಾರೆ.
ರಾಜ್ಯದಲ್ಲಿ ಬಿಜೆಪಿ ಸರಕಾರ ರಚನೆಯಾಗಲು ಕಾರಣರಾದವರನ್ನು ಗೆಲ್ಲಿಸಿಕೊಂಡು ಬರುವ ಜವಾಬ್ದಾರಿ ನಮ್ಮ ಮೇಲಿದೆ. ಇದನ್ನು ನಿಭಾಯಿಸಬೇಕು. ಇಲ್ಲವಾದಲ್ಲಿ ಸರಕಾರವೇ ಉರುಳಬೇಕಾಗುತ್ತದೆ. ಇದನ್ನು ಗಮನದಲ್ಲಿಟ್ಟುಕೊಂಡು ಎಚ್ಚರಿಕೆಯಿಂದ ಕಾರ್ಯ ನಿರ್ವಹಸಬೇಕು ಎಂದು ಸಚಿವರಿಗೆ ಸೂಚಿಸಿದ್ದಾರೆ.
ಒಂದು ವೇಳೆ ಚುನಾವಣೆಯಲ್ಲಿ ಸೂಕ್ತ ಫಲಿತಾಂಶ ಬರದಿದ್ದರೆ ಸಚಿವರಾಗಿ ಮುಂದುವರಿಯುವುದು ಕೆಲವರಿಗೆ ಕಷ್ಟವಾಗಬಹುದು. ಮುಂದಿನ ಎರಡು ವಾರಗಳ ಕಾಲ ನೀಡಿರುವ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸಬೇಕು. ಇಲ್ಲವಾದಲ್ಲಿ ತಲೆದಂಡಕ್ಕೆ ಸಿದ್ಧರಾಗಬೇಕಾಗುತ್ತದೆ ಎಂದು ಯಡಿಯೂರಪ್ಪ ತಿಳಿಸಿದ್ದಾರೆ.
ಬಿಜೆಪಿ ಸರಕಾರದ ಅಳಿವು ಉಳಿವು ಪ್ರಶ್ನೆಯಾಗಿರುವ ಉಪ ಚುನಾವಣೆಯನ್ನು ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಗಂಭೀರವಾಗಿ ಪರಿಗಣಿಸಿದ್ದಾರೆ. ಹೀಗಾಗಿ, ಉಪ ಚುನಾವಣೆಯಲ್ಲಿ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಂಡು ಬರುವ ಹೊಣೆಯನ್ನು ಮುಖ್ಯಮಂತ್ರಿ ಯಡಿಯೂರಪ್ಪ ಈಗ ಸಚಿವರಿಗೆ ಹೊರಿಸಿದ್ದಾರೆ.