ಬೆಂಗಳೂರು, ನ.21(Daijiworld News/SS): ದಬ್ಬಾಳಿಕೆಯ ವಿರುದ್ಧ ಹೋರಾಡಿದ 10,000 ಆದಿವಾಸಿಗಳ ವಿರುದ್ಧ ಕಠಿಣವಾದ 'ದೇಶದ್ರೋಹ' ಕಾನೂನು ದಾಖಲಿಸಿದಾಗ ನಮ್ಮ ರಾಷ್ಟ್ರದ ಆತ್ಮಸಾಕ್ಷಿಗೆ ಆಘಾತವನ್ನುಂಟು ಮಾಡಬೇಕಾಗಿತ್ತು. ಮಾಧ್ಯಮದಲ್ಲಿ ಈ ವಿಷಯದ ಬಗ್ಗೆ ಬಿರುಗಾಳಿ ಏಳಬೇಕಾಗಿತ್ತು. ಆದರೆ ಅದು ಆಗಿಲ್ಲ ಎಂದು ರಾಹುಲ್ ಗಾಂಧಿ ಬೇಸರ ವ್ಯಕ್ತಪಡಿಸಿದ್ದಾರೆ.
2017 ರಲ್ಲಿ ಸ್ವಾಯತ್ತ ಪ್ರದೇಶಕ್ಕೆ ಒತ್ತಾಯಿಸಿ ಪ್ರಾರಂಭವಾದ ಪಾಟಲ್ಗಾಡಿ ಎಂಬ ಪ್ರತಿಭಟನಾ ಆಂದೋಲನದದಲ್ಲಿ ಭಾಗಿಯಾದ ಖುಂಟಿ ಜಿಲ್ಲೆಯ 10,000 ಆದಿವಾಸಿಗಳ ವಿರುದ್ಧ ಜಾರ್ಖಂಡ್ ಸರ್ಕಾರವು ದೇಶದ್ರೋಹ ಕಾನೂನಿನಡಿ ಪ್ರಕರಣ ದಾಖಲಿಸಿದೆ.
ಈ ಹಿನ್ನೆಲೆ ಪ್ರತಿಕ್ರಿಯಿಸಿರುವ ಅವರು, ನಮ್ಮ 'ಮಾರಾಟವಾದ' ಮಾಧ್ಯಮವು ತನ್ನ ಧ್ವನಿಯನ್ನು ಕಳೆದುಕೊಂಡಿರಬಹುದು. ನಾಗರಿಕರಾಗಿ ನಾವು ಈ ಜವಾಬ್ದಾರಿಯನ್ನು ನಿಭಾಯಿಸಬಹುದೇ..? ಎಂದು ಮಾಧ್ಯಮಗಳ ವಿರುದ್ಧ ಕಿಡಿಕಾರಿದ್ದಾರೆ.
ಇಂತಹ ಆತಂಕಕಾರಿ ವಿಷಯದ ಬಗ್ಗೆ ಮಾಧ್ಯಮಗಳು ಧ್ವನಿ ಎತ್ತಿಲ್ಲ. ಆದರೆ ಈ ವಿಷಯದಲ್ಲಿ ನಾಗರಿಕ ಸಮಾಜವಾದರೂ ಧ್ವನಿ ಎತ್ತಬೇಕು ಎಂದು ರಾಹುಲ್ ಗಾಂಧಿ ಒತ್ತಾಯಿಸಿದ್ದಾರೆ.