ಅಹಮದಾಬಾದ್, ನ 21 (Daijiworld News/MB): ಬೆಂಗಳೂರಿನ ದಂಪತಿಗಳು ನೀಡಿದ ದೂರಿನ ಅನ್ವಯ ಮಕ್ಕಳನ್ನು ಅಪಹರಿಸಿ, ಅಕ್ರಮ ಬಂಧನದಲ್ಲಿರಿಸಿದ ಆರೋಪದ ಮೇಲೆ ಸ್ವಯಂ ಘೋಷಿತ ದೇವಮಾನವ ಸ್ವಾಮಿ ನಿತ್ಯಾನಂದ ವಿರುದ್ಧ ಎಫ್ ಐಆರ್ ದಾಖಲಾಗಿದೆ.
ನಿತ್ಯಾನಂದನ ಇಬ್ಬರು ಶಿಷ್ಯರಾದ ಪ್ರಿಯಾತತ್ವ ರಿಧಿ ಕಿರಣ್ ಹಾಗೂ ಸಾಧ್ವಿ ಪ್ರಾಣಪ್ರಿಯಾನಂದ ಅವರನ್ನು ಪೊಲೀಸರು ಬಂಧಿಸಲಾಗಿದೆ ಎಂದು ಗುಜರಾತ್ ಪೊಲೀಸರು ತಿಳಿಸಿದ್ದಾರೆ.
ಅಕ್ರಮ ಬಂಧನಸಲ್ಲಿದ್ದ ನಾಲ್ಕು ಮಕ್ಕಳನ್ನು ಪೊಲೀಸರು ರಕ್ಷಿಸಿದ ಬಳಿಕ ಅವರಿಂದ ಹೇಳಿಕೆ ಪಡೆದು ನಿತ್ಯಾನಂದ ಹಾಗೂ ಆತನ ಶಿಷ್ಯರ ವಿರುದ್ಧ, ನಾಲ್ಕು ಮಕ್ಕಳನ್ನು ಅಪಹರಿಸಿ, ಅಕ್ರಮ ಬಂಧನದಲ್ಲಿಟ್ಟು ಅವರಿಂದ ದೇಣಿಗೆ ಸಂಗ್ರಹಿಸಿದ ಆರೋಪದ ಮೇಲೆ ಕೇಸ್ ದಾಖಲಾಗಿದೆ.
ನವೆಂಬರ್ 19 ರಂದು ನಿತ್ಯಾನಂದ ಅವರು ನಿರ್ವಹಿಸುವ ಶಿಕ್ಷಣ ಸಂಸ್ಥೆಗಳಲ್ಲಿ ವಿದ್ಯಾಭ್ಯಾಸಕ್ಕಾಗಿ 7 ವರ್ಷದಿಂದ 15 ವರ್ಷದವರೆಗಿನ ತಮ್ಮ ನಾಲ್ವರು ಮಕ್ಕಳನ್ನು 2013ರಲ್ಲಿ ಸೇರಿಸಿದ್ದೆವು. ಆದರೆ 2 ಹೆಣ್ಣು ಮಕ್ಕಳನ್ನು ಮಾತ್ರ ಬೆಂಗಳೂರಿನಿಂದ ಅಹಮದಾಬಾದ್'ನಲ್ಲಿರುವ ದೆಹಲಿ ಪಬ್ಲಿಕ್ ಶಾಲೆಯ ಆವರಣದಲ್ಲಿರುವ ನಿತ್ಯಾನಂದನ ಧ್ಯಾನಪೀಠವಾಗಿರುವ ಯೋಗಿನಿ ಸರ್ವಜ್ಞಾನಪೀಠಂ ಎಂಬಲ್ಲಿಗೆ ವರ್ಗಾವಣೆ ಮಾಡಲಾಗಿದೆ. ಅವರನ್ನು ಭೇಟಿ ಮಾಡುವ ಅವಕಾಶವೂ ನೀಡುತ್ತಿಲ್ಲ. ಸ್ವಯಂ ಘೋಷಿತ ದೇವಮಾನವ ಸ್ವಾಮಿ ನಿತ್ಯಾನಂದ ಅವರು ತಮ್ಮ ಇಬ್ಬರು ಹೆಣ್ಣು ಮಕ್ಕಳನ್ನು ಅಕ್ರಮ ಬಂಧನದಲ್ಲಿಟ್ಟುಕೊಂಡಿದ್ದಾರೆ. ಅವರನ್ನು ರಕ್ಷಣೆ ಮಾಡಬೇಕೆಂದು ಕೋರಿ ಬೆಂಗಳೂರು ಮೂಲದ ದಂಪತಿಗಳು ಗುಜರಾತ್ ಹೈಕೋರ್ಟ್ ಮೊರೆ ಹೋಗಿದ್ದರು.