ನವದೆಹಲಿ, ನ.21(Daijiworld News/SS): ಭಾರತದ 3 ಸೇನಾ ಪಡೆಗಳಿಗೆ ಹೊಸ ಮುಖ್ಯಸ್ಥರೊಬ್ಬರನ್ನು ನೇಮಕ ಮಾಡಲು ಕೇಂದ್ರ ಸರ್ಕಾರ ನಿರ್ಧರಿಸಿದೆ.
ಹೊಸ ಹುದ್ದೆಯ ಹೊಣೆಗಾರಿಕೆ ನಿರ್ಧರಿಸಲು ಅಂತಿಮಗೊಳಿಸಲು ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ನೇತೃತ್ವದಲ್ಲಿ ಸಮಿತಿ ರಚಿಸಲಾಗಿದೆ. ಜನವರಿಯೊಳಗೆ ಆ ನೇಮಕಾತಿಯನ್ನು ಪೂರ್ಣಗೊಳಿಸುವ ನಿರೀಕ್ಷೆಗಳಿವೆ. ರಕ್ಷಣಾ ಪಡೆಗಳ ಮುಖ್ಯಸ್ಥ ಎಂಬ ಹೆಸರಿನ ಹುದ್ದೆ ಇದಾಗಿದೆ.
ಹಾಲಿ ಭೂಸೇನಾ ಮುಖ್ಯಸ್ಥರಾಗಿರುವ ಡಿ.31ರಂದು ನಿವೃತ್ತರಾಗಲಿರುವ ಜನರಲ್ ಬಿಪಿನ್ ರಾವತ್ ಅವರಿಗೆ ಆ ಹುದ್ದೆ ಒಲಿಯುವ ಸಾಧ್ಯತೆಗಳಿವೆ ಎಂದು ಮೂಲಗಳು ತಿಳಿಸಿದೆ.
ಭೂಸೇನೆ, ನೌಕಾಸೇನೆ ಮತ್ತು ವಾಯುಸೇನೆಗಳಿಗೆ ಪ್ರತ್ಯೇಕ ಮುಖ್ಯಸ್ಥರಿದ್ದಾರೆ. ಈ 3 ಪಡೆಗಳ ಮುಖ್ಯಸ್ಥರ ಜೊತೆಗೆ ಸಮನ್ವಯ ಸಾಧಿಸಿ ಪ್ರಧಾನಿ ಹಾಗೂ ರಕ್ಷಣಾ ಸಚಿವರಿಗೆ ನೇರವಾಗಿ ವರದಿ ಮಾಡಿಕೊಳ್ಳಲು ಪ್ರತ್ಯೇಕ ಹುದ್ದೆ ಸೃಷ್ಟಿಸಬೇಕು ಎಂದು ಕಾರ್ಗಿಲ್ ಸಮರ ಕುರಿತಾದ ಸಮಿತಿ 1999ರಲ್ಲೇ ಶಿಫಾರಸು ಮಾಡಿತ್ತು.