ಬೆಂಗಳೂರು, ನ.21(Daijiworld News/SS): ಜನರು ಅನರ್ಹರನ್ನು ಸಹಿಸಲ್ಲ, ಜನರೇ ಅವರನ್ನು ಸೋಲಿಸುತ್ತಾರೆ. ಅನರ್ಹರು 15 ಜನವೂ ಸೋಲುತ್ತಾರೆ. ಇವರ ನಯ ವಿನಯದ ಸುಳ್ಳನ್ನು ಜನ ನಂಬಲ್ಲ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅನರ್ಹರ ಬಗ್ಗೆ ಜನರೇ ಚರ್ಚೆ ಮಾಡುತ್ತಿದ್ದಾರೆ. ಅವರು ಹಣದಾಸೆಗೆ ಹೋಗಿದ್ದಾರೆ ಅಂತಾ ಅವರೇ ಹೇಳುತ್ತಿದ್ದಾರೆ. ನಾನು ಪ್ರಚಾರದಲ್ಲಿ ಬರೀ ಪ್ರಶ್ನೆ ಕೇಳುತ್ತಿದ್ದೇನೆ. ಜನರಿಗೆ ಗೊತ್ತಾಗಿದೆ ಅವರೇ ಉತ್ತರ ಕೊಡುತ್ತಿದ್ದಾರೆ ಎಂದು ದೂರಿದರು.
ಹುಣಸೂರು ಉಪಚುನಾವಣೆ ಕುರಿತು ಮಾತನಾಡಿದ ಅವರು, ಜಿ.ಟಿ ದೇವೇಗೌಡರ ಮನಸ್ಥಿತಿ ಹೇಗಿದೆ ಅಂತಾ ಮೊದಲು ಗೊತ್ತಾಗಬೇಕು. ಅವರು ಯಾವ ಕಾರಣಕ್ಕೆ ದೂರ ಇದ್ದಾರೆ ಎಂದು ತಿಳಿದುಕೊಳ್ಳುತ್ತೇನೆ. ನಂತರ ಜಿ.ಟಿ ದೇವೇಗೌಡರ ಜೊತೆ ಮಾತನಾಡುತ್ತೇನೆ. ಆಮೇಲೆ ನೀವು ವಿಶ್ಲೇಷಣೆ ಮಾಡಿಕೊಳ್ಳಿ ಎಂದು ಹೇಳಿದರು.
ಇದೇ ವೇಳೆ ಎಂಟಿಬಿ ಕಂಡರೆ ಮುಖ್ಯಮಂತ್ರಿ ಯಡಿಯೂರಪ್ಪಗೆ ಪ್ರೀತಿ. ಆದರೆ ಎಂಟಿಬಿಗೆ ಅವರು ಯಾವುದೇ ಹಣವನ್ನು ನೀಡಿಲ್ಲ. ಬದಲಾಗಿ ಹಣ ಪಡೆದುಕೊಂಡಿದ್ದಾರೆ ಎಂದು ವ್ಯಂಗ್ಯವಾಡಿದರು.