ಶಿಮ್ಲಾ, ಅ.17 (DaijiworldNews/AA): ಹಿಮಾಚಲ ಪ್ರದೇಶದ ಶಿಮ್ಲಾ ಜಿಲ್ಲೆಯಲ್ಲಿ ಶನಿವಾರ ಮುಂಜಾನೆ 4.1 ತೀವ್ರತೆಯ ಭೂಕಂಪ ಸಂಭವಿಸಿದೆ.

ಶನಿವಾರ ಮುಂಜಾನೆ ಭಾರತೀಯ ಕಾಲಮಾನ 4:36ಕ್ಕೆ ಭೂಮಿ ಕಂಪಿಸಿದೆ. ರಿಕ್ಟರ್ ಮಾಪಕದಲ್ಲಿ 4.1 ತೀವ್ರತೆ ದಾಖಲಾಗಿದೆ. ಭೂಮಿಯ ಮೇಲ್ಮೈಯಿಂದ ಸುಮಾರು 10 ಕಿಲೋಮೀಟರ್ ಆಳದಲ್ಲಿ ಭೂಕಂಪ ಸಂಭವಿಸಿದೆ ಎಂದು ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ ಮಾಹಿತಿ ಬಿಡುಗಡೆ ಮಾಡಿದೆ.
ಶಿಮ್ಲಾ ಜಿಲ್ಲೆಯ ರೋಹ್ರು ಪ್ರದೇಶದಿಂದ ಸುಮಾರು 24 ಕಿಲೋಮೀಟರ್ ದೂರದಲ್ಲಿ ಭೂಕಂಪದ ಕೇಂದ್ರಬಿಂದು ಪತ್ತೆಯಾಗಿದೆ. ಭೂಕಂಪದಿಂದ ಸಂಭವಿಸಿರಬಹುದಾದ ಆಸ್ತಿ-ಪಾಸ್ತಿ ಹಾನಿ ಅಥವಾ ಜೀವಹಾನಿಯ ಕುರಿತು ಯಾವುದೇ ವರದಿಯಾಗಿಲ್ಲ.