ಹುಬ್ಬಳ್ಳಿ, ಅ.17 (DaijiworldNews/AA): ಪ್ರಧಾನಿ ನರೇಂದ್ರ ಮೋದಿ ಸರ್ಕಾರವು ಸದಾ ರೈತರ ಪರವಾಗಿ ಕೆಲಸ ಮಾಡುತ್ತಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿದ್ದಾರೆ.

ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, "ಸರ್ಕಾರದ ಈ ಬದ್ಧತೆಯು ಎಂಎಸ್ಪಿ (ಕನಿಷ್ಠ ಬೆಂಬಲ ಬೆಲೆ) ಮೂಲಕ ಭತ್ತ ಮತ್ತು ಗೋಧಿಯಂತಹ ಬೆಳೆಗಳ ಬೃಹತ್ ಖರೀದಿಯಲ್ಲಿ ಸ್ಪಷ್ಟವಾಗಿದೆ. ಸಂಗ್ರಹಣೆಯ ಸಮಸ್ಯೆಗಳ ಹೊರತಾಗಿಯೂ ಸರ್ಕಾರವು ರೈತರಿಂದ ಉತ್ಪನ್ನಗಳನ್ನು ಖರೀದಿಸುವುದನ್ನು ಮುಂದುವರೆಸಿದೆ" ಎಂದರು.
"ವಿಶೇಷವಾಗಿ ಎಥೆನಾಲ್ ಖರೀದಿಯಲ್ಲಿ ಗಮನಾರ್ಹ ಹೆಚ್ಚಳವಾಗಿದೆ. 2014ಕ್ಕಿಂತ ಮೊದಲು ಕೇವಲ 38 ಕೋಟಿ ಲೀಟರ್ ಎಥೆನಾಲ್ ಖರೀದಿಸಲಾಗುತ್ತಿತ್ತು. ಆದರೆ, ಮೋದಿ ಸರ್ಕಾರವು ಈಗ 1200 ಕೋಟಿ ಲೀಟರ್ ಎಥೆನಾಲ್ ಖರೀದಿಸುತ್ತಿದೆ. ಇದರಲ್ಲಿ ಕರ್ನಾಟಕದಿಂದಲೇ 165 ಕೋಟಿ ಲೀಟರ್ ಎಥೆನಾಲ್ ಖರೀದಿ ಮಾಡಲಾಗಿದೆ. ಇದರಿಂದ ಕಬ್ಬು ಬೆಳೆಗಾರರಿಗೆ ಹೆಚ್ಚಿನ ಅನುಕೂಲವಾಗುತ್ತಿದೆ" ಎಂದು ಅಭಿಪ್ರಾಯಪಟ್ಟರು.
"ಕಬ್ಬು ಬೆಳೆಗಾರರ ಸಮಸ್ಯೆಗಳಿಗೆ ಸ್ಪಂದಿಸಿ ದೆಹಲಿಯಲ್ಲಿ ನಡೆದ ಸಭೆಯ ನಂತರ ಸಮಿತಿಯನ್ನು ರಚಿಸಲಾಗಿದೆ. ರೈತರ ಮತ್ತು ಬಳಕೆದಾರರ ಹಿತಾಸಕ್ತಿಗಳ ನಡುವೆ ಸಮತೋಲನ ಕಾಯ್ದುಕೊಳ್ಳುವುದು ಸರ್ಕಾರದ ಆದ್ಯತೆಯಾಗಿದೆ" ಎಂದು ಹೇಳಿದರು.