ನವದೆಹಲಿ, ನ.21(Daijiworld News/SS): ರಾಷ್ಟ್ರೀಯ ನಾಗರಿಕತ್ವ ನೋಂದಣಿಯನ್ನು ದೇಶವ್ಯಾಪಿ ವಿಸ್ತರಿಸುತ್ತೇವೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಘೋಷಿಸಿದ್ದಾರೆ.
ರಾಜ್ಯಸಭೆಯಲ್ಲಿ ಮಾತನಾಡಿದ ಅವರು, ಈ ಮಸೂದೆಯ ಉದ್ದೇಶ, ಬಾಂಗ್ಲಾದೇಶ, ಪಾಕಿಸ್ಥಾನ ಮತ್ತು ಅಫ್ಘಾನಿಸ್ಥಾನದಿಂದ ವಲಸೆ ಬಂದಿರುವ ಮುಸ್ಲಿಮೇತರ ಅಂದರೆ ಹಿಂದೂಗಳು, ಬೌದ್ಧರು, ಜೈನರು, ಕ್ರೈಸ್ತರು, ಸಿಕ್ಖರು ಹಾಗೂ ಪಾರ್ಸಿಗಳಿಗೆ ಭಾರತದ ನಾಗರಿಕತ್ವ ನೀಡುವುದಾಗಿದೆ. ಸರಕಾರ ಇವರಿಗೆ ನಾಗರಿಕತ್ವ ನೀಡುವ ಆಶಯ ಹೊಂದಿದೆ ಎಂದು ತಿಳಿಸಿದರು.
ದೇಶದ ನಾನಾ ರಾಜ್ಯಗಳಲ್ಲಿ ನೆಲೆಸಿರುವ ಅಕ್ರಮ ವಲಸಿಗರನ್ನು, ಅದರಲ್ಲೂ 1971ರ ಅನಂತರ ಬಾಂಗ್ಲಾದೇಶದಿಂದ ಇಲ್ಲಿಗೆ ಬಂದು ತೂರಿಕೊಂಡಿರುವ ಬಾಂಗ್ಲಾ ನಿವಾಸಿಗಳನ್ನು ಪತ್ತೆ ಮಾಡಲು ಎನ್ಆರ್ಸಿಯನ್ನು ಜಾರಿ ಮಾಡಲಾಗುತ್ತಿದೆ. ಹಾಗೆಂದು ಯಾವುದೇ ಧರ್ಮದವರೂ ಎನ್ಆರ್ಸಿಯಿಂದ ತಮಗೇನೋ ಆಗಿಬಿಡುತ್ತದೆ ಎಂದು ಭಯಪಡಬೇಕಿಲ್ಲ ಅಂತಾ ಹೇಳಿದರು.
ಭಾರತೀಯ ಪ್ರಜೆಗಳಾಗಿರುವ ಎಲ್ಲಾ ಧರ್ಮೀಯ ಜನರ ಹೆಸರನ್ನೂ ಸೇರಿಸಲಾಗುತ್ತದೆ. ಧರ್ಮದ ಆಧಾರದಲ್ಲಿ ತಾರತಮ್ಯ ಮಾಡುವ ಪ್ರಶ್ನೆಯೇ ಇಲ್ಲ. ಎನ್’ಆರ್’ಸಿಯೇ ಬೇರೆ, ಪೌರತ್ವ ತಿದ್ದುಪಡಿ ಮಸೂದೆಯೇ ಬೇರೆ ಎಂದು ಸ್ಪಷ್ಟಪಡಿಸಿದರು.