ಮುಂಬೈ, ನ 21 (Daijiworld News/MB): ಮಹಾರಾಷ್ಟ್ರದಲ್ಲಿ ಕಳೆದ ಒಂದು ತಿಂಗಳಿಂದ ಸರ್ಕಾರ ರಚನೆ ಬಗ್ಗೆ ಮಹಾ ಬಿಕ್ಕಟ್ಟು ಏರ್ಪಟ್ಟಿದ್ದು, ಇದೀಗ ಕೊನೆಗೂ ಬಿಕ್ಕಟ್ಟು ಬಗೆಹರಿಯುವ ಹಂತಕ್ಕೆ ಬಂದು ನಿಂತಿದೆ. ಈ ಕುರಿತು ಸದ್ಯ ಲಭಿಸಿದ ಮಾಹಿತಿ ಪ್ರಕಾರ ಶಿವಸೇನೆ, ಎನ್ ಸಿಪಿ ಮತ್ತು ಕಾಂಗ್ರೆಸ್ ಸರ್ಕಾರ ರಚನೆಯ ಮಾತುಕತೆಗಳನ್ನು ಅಂತಿಮಗೊಳಿಸಿದ್ದು,ಈ ಕುರಿತು ಮೂರೂ ಪಕ್ಷಗಳು ನಾಳೆ ಜಂಟಿ ಸುದ್ದಿಗೋಷ್ಠಿಯಲ್ಲಿ ಅಧಿಕೃತವಾಗಿ ಘೋಷಣೆ ಮಾಡುವ ಸಾಧ್ಯತೆಯಿದೆ.
ಈ ಕುರಿತು ಪತ್ರಿಕಾಗೋಷ್ಠಿಯಲ್ಲಿ ನಡೆಸಿ ಮಾತನಾಡಿದ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಅವರು, ಎನ್'ಸಿಪಿ ಜೊತೆಗೆ ಕಾಂಗ್ರೆಸ್ ಅಧ್ಯಕ್ಷ ಸೋನಿಯಾ ಗಾಂಧಿಯವರು ತಮ್ಮ ನಿವಾಸದಲ್ಲಿ ಸುದೀರ್ಘ ಚರ್ಚೆಗಳನ್ನು ನಡೆಸಿದ್ದಾರೆ ಎಂದು ಹೇಳಿದ್ದಾರೆ.
ಇಂದು ಸೋನಿಯಾ ಗಾಂಧಿ ನಿವಾಸದಲ್ಲಿ ಎನ್ ಸಿಪಿ ನಾಯಕ ಶರದ್ ಪವಾರ್ ಮತ್ತು ಕಾಂಗ್ರೆಸ್ ಪಕ್ಷ ಭೇಟಿಯಾಗಿ ತುರ್ತು ಸಭೆ ಸೇರಿದ್ದು, ಮತ್ತೊಂದು ಸುತ್ತಿನ ಮಾತುಕತೆ ನಡೆಯುವ ಸಾಧ್ಯತೆಯಿದೆ.
ಈವರೆಗೆ ದೊರೆತಿರುವ ಮಾಹಿತಿ ಪ್ರಕಾರ ಶಿವಸೇನೆ ಮತ್ತು ಎನ್ ಸಿಪಿ ತಲಾ ಎರಡೂವರೆ ವರ್ಷಗಳ ಕಾಲ ಮುಖ್ಯಮಂತ್ರಿ ಹುದ್ದೆಯನ್ನು ವಹಿಸಿಕೊಳ್ಳಲಿದ್ದು, ಯಾವ ಪಕ್ಷ ಮೊದಲು ಮುಖ್ಯಮಂತ್ರಿ ಸ್ಥಾನ ವಹಿಸಿಕೊಳ್ಳಲಿದೆ ಎಂದು ಸ್ಪಷ್ಟವಾಗಿಲ್ಲ.
ಎನ್ ಸಿಪಿಗೆ ಮೊದಲು ಮುಖ್ಯಮಂತ್ರಿ ಸ್ಥಾನ ಲಭ್ಯವಾಗಲಿದ್ದು ಶರದ್ ಪವಾರ್ ಅಥವಾ ಅವರ ಪುತ್ರಿ ಸುಪ್ರಿಯಾ ಸುಳೆ ಮುಖ್ಯಮಂತ್ರಿಯಾಗುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ.
ಈ ನಡುವೆ ಹೇಳಿಕೆ ನೀಡಿರುವ ಶಿವಸೇನೆ ನಾಯಕ ಸಂಜಯ್ ರಾವತ್ ಅವರು, ಮಹಾರಾಷ್ಟ್ರ ನೂತನ ಸರ್ಕಾರ ರಚನೆ ಕುರಿತು 2 ದಿನಗಳಲ್ಲಿ ಅಂತಿಮ ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದಿದ್ದು ಡಿಸೆಂಬರ್ 1ರೊಳಗಾಗಿ ಸರ್ಕಾರ ರಚನೆ ಪ್ರಕ್ರಿಯೆ ನಡೆಯಲಿದೆ. ಮೂರು ಪಕ್ಷ ಸೇರಿ ಸುದೀರ್ಘ ಚರ್ಚೆ ಮಾಡಿದ್ದೇವೆ. ಎರಡು ದಿನಗಳಲ್ಲಿ ಸರಕಾರ ರಚನೆಯ ಕುರಿತು ನಿರ್ಧಾರ ಪ್ರಕಟಿಸಲಾಗುವುದು ಎಂದು ಹೇಳಿದ್ದಾರೆ.