ಹಿರೇಕೆರೂರು, ನ 21 (Daijiworld News/MB): ಅನರ್ಹ ಶಾಸಕರ ರಾಜಿನಾಮೆಯಿಂದಾಗಿ ತೆರವುಗೊಂಡಿದ್ದ 17 ಕ್ಷೇತ್ರಗಳ ಪೈಕಿ 15 ಕ್ಷೇತ್ರಗಳಿಗೆ ನಡೆಯುವ ಉಪಚುನಾವಣೆಯಲ್ಲಿ ಹಿರೇಕೆರೂರು ಕ್ಷೇತ್ರಕ್ಕೆ ಜೆಡಿಎಸ್ ಪಕ್ಷದ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದ ಕಬ್ಬಿಣಕಂಥಿಮಠದ ಶಿವಲಿಂಗ ಶಿವಾಚಾರ್ಯ ಸ್ವಾಮೀಜಿ ಹಾಗೂ ಅಥಣಿ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಗುರು ದಾಶ್ಯಾಳ್ ಇಂದು ತಮ್ಮ ನಾಮಪತ್ರವನ್ನು ಹಿಂಪಡೆದಿದ್ದಾರೆ.
ನಾಮಪತ್ರ ಹಿಂಪಡೆದ ನಂತರ ಮಾತನಾಡಿದ ಸ್ವಾಮೀಜಿ, ನನಗೆ ರಾಘವೇಂದ್ರ ಅವರು ಭರವಸೆ ನೀಡಿದ್ದಾರೆ. ಹಿರಿಯ ಮಠಾಧೀಶರು ಕೂಡಾ ನಾಮಪತ್ರ ವಾಪಾಸ್ಸು ಪಡೆಯುವಂತೆ ಆದೇಶ ಮಾಡಿದ್ದಾರೆ ಎಂದು ಹೇಳಿದ್ದಾರೆ.
ಸ್ವಾಮೀಜಿಯನ್ನು ಭೇಟಿಯಾದ ನಾಮಪತ್ರ ಹಿಂಪಡೆಯುವಂತೆ ಮುಖ್ಯಮಂತ್ರಿ ಯಡಿಯೂರಪ್ಪರವರ ಪುತ್ರ ರಾಘವೇಂದ್ರ ಅವರು ಮನವೊಲಿಸಿದರು. ತಾಲೂಕಿನ ಜನರ ಬೇಡಿಕೆಗಳನ್ನು ಈಡೇರಿಸುವ ಭರವಸೆ ನೀಡಿದ ನಂತರ ನಾಮಪತ್ರ ವಾಪಸ್ ಪಡೆಯಲು ನಿರ್ಧರಿಸಿದ್ದಾರೆ.
ಸಿಎಂ ಪುತ್ರ ಸಂಸದ ರಾಘವೇಂದ್ರ ಮತ್ತು ಬಿಜೆಪಿ ಕಾರ್ಯಕರ್ತರು ಸ್ವಾಮೀಜಿ ನಾಮಪತ್ರ ವಾಪಸ್ ಪಡೆಯುವ ವೇಳೆ ಜೊತೆಗಿದ್ದರು.