ಗ್ವಾಲಿಯರ್, ನ 21 (Daijiworld News/MSP): ಪೊಲೀಸರಂತೆ ವೇಷ ಧರಿಸಿ ಜನಸಾಮಾನ್ಯರನ್ನು ಮೋಸ ಮಾಡಿರುವ ಘಟನೆ ಹಲವೆಡೆ ವರದಿಯಾಗಿದೆ. ಆದರೆ ಅದಕ್ಕೂ ಒಂದು ಹೆಜ್ಜೆ ಮುಂದಿಟ್ಟಿರುವ ಖದೀಮರು , ನಕಲಿ ಪೊಲೀಸ್ ಠಾಣೆಯನ್ನೇ ತೆರೆದು ಅಧಿಕಾರಿಗಳಂತೆ ಫೋಸ್ ನೀಡಿ ಸ್ಥಳೀಯರನ್ನು ಸುಲಿಗೆ ಮಾಡುತ್ತಿದ್ದ ಬೆಳಕಿಗೆ ಬಂದಿದೆ.
ಗ್ವಾಲಿಯರ್ ನ ಚಂಬಲ್ ಪ್ರದೇಶದಲ್ಲಿ ಈ ಘಟನೆ ನಡೆದಿದ್ದು ನಾಲ್ವರು ಖದೀಮರು ಅಧಿಕಾರಿಗಳಂತೆ ನಟಿಸಿ ಸ್ಥಳೀಯರಿಂದ ಹಣ ಸುಲಿಗೆ ಮಾಡಲು ನಕಲಿ ಪೊಲೀಸ್ ಠಾಣೆಯನ್ನೇ ರಚಿಸಿದ್ದಾರೆ. ಖಾಕಿ ಸಮವಸ್ತ್ರ ಧರಿಸಿದ ನಾಲ್ವರು, ಹೆಚ್ಚಾಗಿ ಸ್ಥಳೀಯರು, ತರಕಾರಿ ಮಾರಾಟಗಾರರು ಮತ್ತು ಟ್ರಕ್ ಚಾಲಕರನ್ನು ಗುರಿಯಾಗಿಸಿ ಸುಲಿಗೆ ಮಾಡುತ್ತಿದ್ದರು.
ಇವರ ವಿರುದ್ದ ಜನರನ್ನು ಸುಲಿಗೆ ಮಾಡುತ್ತಿರುವ ಆರೋಪ ಪ್ರಕರಣ ದಾಖಲಾಗಿದ್ದು, ನಾಲ್ವರು ಆರೋಪಿಗಳನ್ನು ರಿಂಕೇಶ್, ಸುರೇಂದ್ರ, ಕಮಲಾ ಮತ್ತು ಶಿವಂ ಎಂದು ಗುರುತಿಸಲಾಗಿದೆ.
"ಖಾಕಿ ಸಮವಸ್ತ್ರವನ್ನು ಧರಿಸಿ ಫೋನಿ ಪೊಲೀಸ್ ಠಾಣೆಯ ಪೊಲೀಸ್ ಅಧಿಕಾರಿಗಳಂತೆ ನಟಿಸುತ್ತಿದ್ದ ನಾಲ್ವರು, ಮುಗ್ಧ ವ್ಯಾಪಾರಿ ಮತ್ತು ಸ್ಥಳೀಯರನ್ನು ಲೂಟಿ ಮಾಡುತ್ತಿದ್ದರು" ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
" ಯಾವುದಾದರೂ ಬೇರೆ ಉದ್ದೇಶಕ್ಕಾಗಿ ಪೊಲೀಸರು ಈ ನಾಲ್ವರನ್ನು ನೇಮಿಸಿಕೊಂಡಿದ್ದರೋ ಅಥವಾ ಈ ನಾಲ್ವರು ಪುರಸಭೆಯ ರಕ್ಷಣಾ ಸಮಿತಿಗೆ ಸಂಬಂಧಿಸಿದವರೋ ತಿಳಿದಿಲ್ಲ. ಒಟ್ಟಾರೆ ಎಲ್ಲವನ್ನು ಕೂಲಂಕುಷವಾಗಿ ತನಿಖೆ ಮಾಡಲಾಗುತ್ತಿದೆ ಎಂದು ಅಪರಾಧ ವಿಭಾಗದ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಪಂಕಜ್ ಪಾಂಡೆ ಹೇಳಿದ್ದಾರೆ ಎಂದು ರಾಷ್ಟ್ರೀಯ ಮಾಧ್ಯಮ ವರದಿ ಮಾಡಿದೆ.