ನವದೆಹಲಿ, ನ 21 (Daijiworld News/MB): ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್(ಬಿಪಿಸಿಎಲ್), ಏರ್ ಇಂಡಿಯಾ ಸೇರಿದಂತೆ ಕೆಲವು ಸಾರ್ವಜನಿಕ ವಲಯ ಸಂಸ್ಥೆಗಳನ್ನು ಖಾಸಗೀಕರಣಗೊಳಿಸುವುದನ್ನು ಮತ್ತು ಚುನಾವಣಾ ಬಾಂಡ್ ಗಳನ್ನು ಬಿಡುಗಡೆ ಮಾಡಿರುವುದನ್ನು ವಿರೋಧಿಸಿ ಪ್ರತಿಪಕ್ಷ ಕಾಂಗ್ರೆಸ್ ಲೋಕಸಭೆಯಲ್ಲಿ ಬಿಜೆಪಿಯನ್ನು ತರಾಟೆಗೆ ತೆಗೆದುಕೊಂಡು ಇದು ದೊಡ್ಡ ಹಗರಣ ಎಂದು ಹೇಳಿದೆ.
ಕಾಂಗ್ರೆಸ್ ಸದಸ್ಯರು ಸದನದ ಬಾವಿಗಿಳಿದು ಸುಮಾರು 15 ನಿಮಿಷಗಳ ಕಾಲ ಪ್ರತಿಭಟನೆ ಮಾಡಿದ್ದು ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು. ನಂತರ ಸಭಾಧ್ಯಕ್ಷ ಓಂ ಬಿರ್ಲಾ ರವರು ಶೂನ್ಯ ವೇಳೆಯಲ್ಲಿ ವಿಷಯ ಪ್ರಸ್ತಾವನೆಗೆ ಅವಕಾಶ ನೀಡುವುದಾಗಿ ತಿಳಿಸಿದ ಹಿನ್ನಲೆಯಲ್ಲಿ ಕಾಂಗ್ರೆಸ್ ಸದಸ್ಯರುಪ್ರತಿಭಟನೆ ನಿಲ್ಲಿಸಿ ತಮ್ಮ ಸ್ಥಾನಕ್ಕೆ ವಾಪಸ್ಸಾದರು.
ಕಾಂಗ್ರೆಸ್ ಸಂಸದ ಅಧೀರ್ ರಂಜನ್ ಚೌಧರಿ "ಇದು ಬಹು ದೊಡ್ಡ ಹಗರಣ. ಈ ಕುರಿತು ಸದನದಲ್ಲಿ ಮಾತನಾಡಲು ನಮಗೆ ಅವಕಾಶ ನೀಡಬೇಕು" ಎಂದು ಹೇಳಿದ್ದು, ಸಭಾಧ್ಯಕ್ಷರು, "ಕ್ರೀಡಾಪಟುಗಳ ಬಗ್ಗೆ ಸದನದಲ್ಲಿ ಗಂಭೀರವಾದ ಚರ್ಚೆ ನಡೆಯುತ್ತಿದೆ. ಇಂತಹ ಸಮಯದಲ್ಲಿ ನೀವು ಈ ರೀತಿ ವರ್ತಿಸುವುದು ತಪ್ಪು. ಸದನದ ಗೌರವ, ಘನತೆ ಕಾಪಾಡುವುದು ಎಲ್ಲಾ ಸದಸ್ಯರ ಜವಾಬ್ದಾರಿಯಾಗಿದ್ದು ಪ್ರಶ್ನೋತ್ತರ ಅವಧಿ ಮುಖ್ಯವಾದದ್ದು ಸಂಸದರು ಕಲಾಪಗಳಿಗೆ ಅಡ್ಡಿಪಡಿಸಬಾರದು" ಎಂದು ಹೇಳಿದರು.
ಹಾಗೆಯೇ "ಕಾಂಗ್ರೆಸ್ ಹೊರಡಿಸಿರುವ ನಿಲುವಳಿ ಸೂಚನೆಯನ್ನು ಒಪ್ಪುವುದಿಲ್ಲ. ಆದರೆ ಶೂನ್ಯ ವೇಳೆಯಲ್ಲಿ ಮಾತನಾಡಲು ಅವಕಾಶ ನೀಡುತ್ತೇನೆ. ನಾನು ಹೊಸಬ. ನೀವು ಹಿರಿಯರು. ಬಾವಿಯ ಬಳಿ ಬರದೆ ಸಂಪ್ರದಾಯಗಳನ್ನು ಕಾಪಾಡಿ" ಎಂದರು.
ಇದಕ್ಕೆ ಪ್ರತಿಕ್ರಿಯಿಸಿದ ಪ್ರತಿಪಕ್ಷದ ಸದಸ್ಯರು, ನೀವು ಸದನಕ್ಕೆ ಅಧ್ಯಕ್ಷರು, ಹೊಸಬರಲ್ಲ. ಕಲಾಪದಲ್ಲಿ ಪ್ರಮುಖ ವಿಷಯಗಳ ಚರ್ಚೆ ನಡೆಯಬೇಕೆಂಬ ಉದ್ದೇಶದಿಂದ ನಾವು ಒತ್ತಾಯಪೂರ್ವಕವಾಗಿ ನಿಲುವಳಿ ಸೂಚನೆ ನೀಡುತ್ತಿದ್ದೇವೆ. ಬದಲಾಗಿ ಸಭಾಧ್ಯಕ್ಷ ಪೀಠಕ್ಕೆ ಅಗೌರವ ತೋರಿಸುವ ಉದ್ದೇಶದಿಂದ ಅಲ್ಲ. ನಾವು ಕಲಾಪ ಸುಗಮವಾಗಿ ನಡೆಯಲು ಸಹಕಾರ ಮಾಡುತ್ತೇವೆ. ಸಭಾಧ್ಯಕ್ಷರು ಕೂಡ ಅದೇ ರೀತಿಯ ಸಹಕಾರ ನೀಡಬೇಕು. ಇದು ದೊಡ್ಡ ಹಗರಣವಾಗಿರುವ ಹಿನ್ನಲೆಯಲ್ಲಿ ನಾವು ನಿಲುವಳಿ ಸೂಚನೆ ಮಾಡಿದ್ದೇವೆ. ದೇಶವನ್ನು ಕೊಳ್ಳೆ ಹೊಡೆಯಲಾಗುತ್ತಿದೆ" ಎಂದು ಒತ್ತಾಯಿಸಿದರು.
ಸ್ವಚ್ಛ ಸರ್ಕಾರ ನಡೆಸುತ್ತಿರುವ ಪ್ರಧಾನಿ ಮೋದಿ ಸರಕಾರದಲ್ಲಿ ಭ್ರಷ್ಟಾಚಾರ ನಡೆಯುವ ಸಾಧ್ಯತೆಯಿಲ್ಲ. ನೀವು ಪ್ರತಿದಿನ ಯಾವುದಾದರೂ ನಿಲುವಳಿ ಸೂಚನೆ ನೀಡುತ್ತೇರಿ. ಇದು ಸರಿಯಾದ ಕ್ರಮವಲ್ಲ ಎಂದು ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಷಿ ಉತ್ತರಿಸಿದರು.