ಬೆಂಗಳೂರು, ನ 21 (Daijiworld News/MSP): ಕಾಂಗ್ರೆಸ್ ಶಾಸಕ ತನ್ವೀರ್ ಸೇಠ್ ಹತ್ಯೆ ಯತ್ನ ಪ್ರಕರಣ ದಿನ ಕಳೆದಂತೆ ರಾಜಕೀಯ ಬಣ್ಣವನ್ನು ಪಡೆಯುತ್ತಿದೆ. ತನ್ವೀರ್ ಸೇಠ್ ಮೇಲಿನ ದಾಳಿಯ ಹಿಂದೆ ಎಸ್’ಡಿಪಿಐ ಸಂಘಟನೆ ಕೈವಾಡದ ವದಂತಿ ಕೇಳಿಬರುತ್ತಿರುವ ಬೆನ್ನಲ್ಲೇ "ಎಸ್’ಡಿಪಿಐ ಹಾಗೂ ಪಿಎಫ್ಐ ನಿಷೇಧಕ್ಕೆ ಕೇಂದ್ರಕ್ಕೆ ಶಿಫಾರಸು ಮಾಡಲಾಗುವುದು" ಎಂದು ಸಚಿವ ಆರ್.ಅಶೋಕ್ ಹೇಳಿದ್ದಾರೆ.
ಪಿಎಫ್ಐ ಹಾಗೂ ಎಸ್ಡಿಪಿಐ ಸಂಘಟನೆ ಹೆಸರು ಹಲವು ಪ್ರಕರಣಗಳಲ್ಲಿ ಕೇಳಿಬಂದಿತ್ತು. ತನ್ವೀರ್ ಸೇಠ್ ಅವರ ಮೇಲೆ ಹತ್ಯೆಗೆ ಯತ್ನವೇ ನಡೆದಿದೆ. ಹೀಗಾಗಿ ಎಸ್ ಡಿಪಿಐ ಸಂಘಟನೆಗೆ ನಿಷೇಧ ಹೇರುವ ಕುರಿತು ಶೀಘ್ರದಲ್ಲೇ ನಿರ್ಧಾರ ಮಾಡಿ ಕೇಂದ್ರ ಗೃಹ ಸಚಿವರ ಜೊತೆ ಮಾತನಾಡಿದ ಬಳಿಕ ನಿಷೇಧಕ್ಕೆ ಮಾಡಲು ಶಿಫಾರಸು ಮಾಡುತ್ತೇವೆ ಎಂದು ಹೇಳಿದ್ದಾರೆ.
ಶಾಸಕ ತನ್ವೀರ್ ಸೇಠ್ ಹತ್ಯೆ ಯತ್ನ ಪ್ರಕರಣಕ್ಕೆ ಸಂಬಂಧಿಸಿದಂತೆ ಪಿಎಫ್ಐ ಹಾಗೂ ಎಸ್ಡಿಪಿಐ ಕಾರ್ಯಕರ್ತ ಫರ್ಹಾನ್ ಪಾಷಾ ಎಂಬಾತನ್ನು ಪೊಲೀಸರು ಬಂಧಿಸಿದ್ದಾರೆ. ಉಳಿದ ಆರೋಪಿಗಳ ಹುಡುಕಾಟ ಮುಂದುವರಿದಿದೆ. ಪಿಎಫ್ಐ ಮುಸ್ಲಿಂ ಸಂಘಟನೆಯಾಗಿದ್ದು ಹಲವು ರಾಜ್ಯಗಳಲ್ಲಿ ಕಾರ್ಯಾಚರಣೆ ನಡೆಸುತ್ತಿದೆ.
"ಕಾಂಗ್ರೆಸ್ ಶಾಸಕ ತನ್ವೀರ್ ಸೇಠ್ ಹತ್ಯೆ ಯತ್ನ ಪ್ರಕರಣವನ್ನು ಮುಖ್ಯಮಂತ್ರಿಗಳು ರಾಜಕೀಯ ಲಾಭವನ್ನು ಪಡೆಯಲು ಬಳಸಿಕೊಳ್ಳುತ್ತಿದ್ದು, ಜನಪ್ರತಿನಿಧಿಗಳಿಗೆ ರಕ್ಷಣೆ ನೀಡುವ ಕರ್ತವ್ಯವನ್ನು ಬಿಜೆಪಿ ಸರ್ಕಾರ ಮರೆತಂತಿದೆ" ಎಂದು ಕಾಂಗ್ರೆಸ್ ಹಿರಿಯ ಮುಖಂಡ ವಿ ಎಸ್ ಉಗ್ರಪ್ಪ ಆರೋಪಿಸಿದ್ದಾರೆ
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಸಿ ಟಿ ರವಿ ಮಾತನಾಡಿ, "ತನ್ವೀರ್ ಸೇಠ್ ಹತ್ಯೆ ಯತ್ನ ಪ್ರಕರಣ ಗಂಭೀರವಾಗಿದ್ದು, ಕಾಂಗ್ರೆಸ್ ನಾಯಕರ ಗುಂಪು ಎಸ್ಡಿಪಿಐಗೆ ಬೆಂಬಲ ನೀಡುತ್ತಿದೆ. ಈ ಸಂಘಟನೆಯ ಬಗ್ಗೆ ಮೃದು ಧೋರಣೆ ಹೊಂದುವ ಅಗತ್ಯವಿಲ್ಲ" ಎಂದು ಅವರು ಹೇಳಿದ್ದಾರೆ. .