ಮಂಡ್ಯ, ನ.22(Daijiworld News/SS): ಉಪ ಚುನಾವಣೆ ನಡೆಯಲಿರುವ 12ಕ್ಕೂ ಹೆಚ್ಚಿನ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಜಯಭೇರಿ ಬಾರಿಸಲಿದೆ. ಡಿಸೆಂಬರ್ 9ರಂದು ಫಲಿತಾಂಶ ಪ್ರಕಟವಾದ ಕೂಡಲೇ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಕುರ್ಚಿ ಕಳೆದುಕೊಳ್ಳಲಿದ್ದಾರೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಭವಿಷ್ಯ ನುಡಿದರು.
ನಾರಾಯಣಗೌಡ ಸೇರಿದಂತೆ ಎಲ್ಲಾ 15 ಜನ ಅನರ್ಹ ಶಾಸಕರೂ ಯಾವುದೇ ಕಾರಣಕ್ಕೂ ಮತ್ತೆ ವಿಧಾನಸಭೆಗೆ ಪ್ರವೇಶಿಸಿದಂತೆ ರಾಜ್ಯದ ಪ್ರಬುದ್ಧ ಮತದಾರರ ಎಚ್ಚರ ವಹಿಸಬೇಕೆಂದು ಹೇಳಿದರು.
ಇದೇ ವೇಳೆ ಮಾತನಾಡಿದ ಕಾಂಗ್ರೆಸ್ ಅಭ್ಯರ್ಥಿ ಕೆ. ಬಿ. ಚಂದ್ರಶೇಖರ್, ನಾರಾಯಣಗೌಡರಿಗೆ ತಾಲೂಕಿನ ಅಭಿವೃದ್ಧಿ ಹಾಗೂ ದೂರದೃಷ್ಠಿಯ ಕೊರತೆಯಿದೆ ಎಂದು ಟೀಕಿಸಿದರು. ರಾಜೀನಾಮೆ ನೀಡಿ ಜನಾದೇಶವನ್ನು ಧಿಕ್ಕರಿಸಿರುವ ನಾರಾಯಣಗೌಡರಿಗೆ ಮತದಾರರು ತಕ್ಕ ಪಾಠ ಕಲಿಸಬೇಕಾಗಿದೆ. ತಮ್ಮಗೆ ಮತ ನೀಡಿ ಜನ ಸೇವೆಗೆ ಅವಕಾಶ ಮಾಡಿಕೊಡಿ ಎಂದು ಮನವಿ ಮಾಡಿದರು.
ಮರಡಿಲಿಂಗೇಶ್ವರ, ಕಿಕ್ಕೇರಿ, ಮಂದಗರೆ, ಅಕ್ಕಿ ಹೆಬ್ಬಾಳು, ಸೋಮನಹಳ್ಳಿ ಮತ್ತಿತರ ಗ್ರಾಮಗಳಲ್ಲಿ ಸಿದ್ದರಾಮಯ್ಯ, ಕಾಂಗ್ರೆಸ್ ಅಭ್ಯರ್ಥಿ ಕೆ. ಬಿ. ಚಂದ್ರಶೇಖರ್ ಪರವಾಗಿ ಪ್ರಚಾರ ನಡೆಸಿ, ಅವರನ್ನು ಬೆಂಬಲಿಸುವಂತೆ ಮತದಾರರಲ್ಲಿ ಮನವಿ ಮಾಡಿದರು.