ಬೆಂಗಳೂರು, ನ.22(Daijiworld News/SS): ಹನ್ನೆರಡು ಕ್ಷೇತ್ರಗಳಲ್ಲಿ ಜೆಡಿಎಸ್ ಸ್ಪರ್ಧಿಸುತ್ತಿದೆ. ಹನ್ನೆರಡು ಕ್ಷೇತ್ರಗಳಲ್ಲಿ ಜೆಡಿಎಸ್ ಪ್ರಬಲ ಪೈಪೋಟಿ ನೀಡುತ್ತದೆ. ಬಿಜೆಪಿ, ಕಾಂಗ್ರೆಸ್ ವಿರುದ್ಧ ನೇರ ಪೈಪೋಟಿ ಇರಲಿದೆ ಎಂದು ಜೆಡಿಎಸ್ ವರಿಷ್ಠ ಹಾಗೂ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹದಿನೈದು ಕ್ಷೇತ್ರಗಳಲ್ಲಿಯೂ ಸ್ಪರ್ಧಿಸಿರುವ ಬಿಜೆಪಿ ಅಭ್ಯರ್ಥಿಗೆ ಎಲ್ಲ ಬಲಗಳೂ ಇವೆ. ದೌರ್ಜನ್ಯವೆಸಗಿದರೂ ಅವರಿಗೆ ಸರ್ಕಾರ ರಕ್ಷಣೆ ನೀಡುತ್ತದೆ ಎಂದು ಟೀಕಿಸಿದರು.
ಬಿಜೆಪಿಯ ಒತ್ತಡದಿಂದಾಗಿ ಅಥಣಿ, ಹಿರೆಕೆರೂರು ಉಪಚುನಾವಣಾ ಕಣದಲ್ಲಿ ಸ್ಪರ್ಧಿಸಿದ್ದ ಪಕ್ಷದ ಅಭ್ಯರ್ಥಿಗಳು ಚುನಾವಣಾ ಕಣದಿಂದ ಹಿಂದೆ ಸರಿದು ನಾಮಪತ್ರ ಹಿಂಪಡೆದಿದ್ದಾರೆ. ಇಪ್ಪತ್ತೈದು ಸಾವಿರಕ್ಕೂ ಹೆಚ್ಚು ಕಾರ್ಯಕರ್ತರು ಸೇರಿದ್ದು ಬಿಜೆಪಿಯವರಿಗೆ ಸಹಿಸಲಾಗಲಿಲ್ಲ. ಹೀಗಾಗಿ ನಮ್ಮ ಕಾರ್ಯಕರ್ತರನ್ನೂ ಕೆಟ್ಟದಾಗಿ ಬೈಯ್ದಿದ್ದಾರೆ ಎಂದು ಆರೋಪಿಸಿದ್ದಾರೆ.
ಹಿರೆಕೆರೂರಿನಲ್ಲಿ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಸ್ವಾಮೀಜಿ ಅವರನ್ನು ರಾಜಕೀಯಕ್ಕೆ ತರುವ ಉದ್ದೇಶವಿರಲಿಲ್ಲ. ಅವರು ತಾವಾಗಿಯೇ ಸ್ಪರ್ಧಿಸಲು ಆಸಕ್ತಿ ತೋರಿದ್ದರಿಂದ ಜೆಡಿಎಸ್ ಅವರಿಗೆ ಬಿ.ಫಾರಂ ನೀಡಿತ್ತು. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಪುತ್ರ ವಿಜಯೇಂದ್ರ ನೇತೃತ್ವದಲ್ಲಿ ಸ್ವಾಮೀಜಿ ಮೇಲೆ ಮಾನಸಿಕ ಒತ್ತಡ ತಂದು ಅವರು ನಾಮಪತ್ರ ವಾಪಸ್ ಪಡೆಯುವಂತೆ ಮಾಡಿದ್ದಾರೆ ಎಂದು ಟೀಕಿಸಿದರು.