ಬೆಂಗಳೂರು, ನ.22(Daijiworld News/SS): ಬಿಜೆಪಿ ಮತ್ತು ಕಾಂಗ್ರೆಸ್, ತಮ್ಮತಮ್ಮ ಅಭ್ಯರ್ಥಿಗಳನ್ನು ಗೆಲ್ಲಿಸಲು ಏನು ಚುನಾವಣಾ ತಂತ್ರ ರೂಪಿಸುತ್ತಿವೆಯೋ, ಅದೇ ರೀತಿ ನಾವೂ ಗೇಮ್ ಪ್ಲಾನ್ ಮಾಡುತ್ತಿದ್ದೇವೆ ಎಂದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಹೇಳಿದ್ದಾರೆ.
ಸಿಎಂ ಯಡಿಯೂರಪ್ಪ ಹೇಳಿರುವಂತೆ ಎಂಟು ಸ್ಥಾನ ಗೆಲ್ಲದಿದ್ದರೆ ಸರ್ಕಾರ ಬೀಳಲಿದೆ. ಅಲ್ಲಿಯವರೆಗೆ ನಾನೇಕೆ ಮೈತ್ರಿ ಬಗ್ಗೆ ಮಾತನಾಡಲಿ. ಫಲಿತಾಂಶವನ್ನು ಕಾದು ನೋಡುತ್ತೇನೆ. ನಂತರದ ಬೆಳವಣಿಗೆಗಳನ್ನು ನೋಡಿ ತೀರ್ಮಾನ ಮಾಡುತ್ತೇವೆ. ಸದ್ಯ ಅನರ್ಹ ಶಾಸಕರನ್ನು ಸೋಲಿಸುವುದು ನಮ್ಮ ಗುರಿ ಎಂದು ಹೇಳಿದರು.
ಪಕ್ಷಾಂತರ ನಿಷೇಧ ಕಾಯ್ದೆ ಹಲ್ಲು ಕಿತ್ತ ಹಾವಾಗಿದೆ. ಶಾಸಕರು ಪಕ್ಷಾಂತರ ಮಾಡದಂತೆ ತಡೆಯಲು ಪಕ್ಷಾಂತರ ನಿಷೇಧ ಕಾಯ್ದೆಯನ್ನು ಮತ್ತಷ್ಟು ಗಟ್ಟಿಗೊಳಿಸಬೇಕಿದೆ. ಇಲ್ಲದಿದ್ದರೆ, ಮುಂದಿನ ದಿನಗಳಲ್ಲಿ ಕಾಯ್ದೆ ತನ್ನ ಮಹತ್ವನ್ನು ಕಳೆದುಕೊಳ್ಳಲಿದೆ ಎಂದು ತಿಳಿಸಿದರು.
ಬಿಜೆಪಿ ಒತ್ತಡ ತಂತ್ರ ಅನುಸರಿಸಿ ಚುನಾವಣೆ ಗೆಲ್ಲಲು ಹೊರಟಿದೆ. ಹಿರೇಕೆರೂರಿನಲ್ಲಿ ನಮ್ಮ ಅಭ್ಯರ್ಥಿಯಾಗಬೇಕಿದ್ದ ಸ್ವಾಮೀಜಿಯವರನ್ನು ಚುನಾವಣಾ ಕಣದಿಂದ ಹಿಂದೆ ಸರಿಸಲು ಸಿಎಂ ಯಡಿಯೂರಪ್ಪ ಪುತ್ರನೇ ಸಭೆ ನಡೆಸಿದ್ದಾರೆ ಎಂದು ಹೇಳಿದರು.