ಅಹ್ಮದಾಬಾದ್ ನ 22 (Daijiworld News/MSP): ಮಕ್ಕಳಿಬ್ಬರನ್ನು ಅಪಹರಿಸಿ ಹಾಗೂ ಅಕ್ರಮ ಬಂಧನದಲ್ಲಿಟ್ಟುಕೊಂಡ ಕ್ರಿಮಿನಲ್ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಸ್ವಯಂಘೋಷಿತ ದೇವಮಾನದ ಸ್ವಾಮಿ ನಿತ್ಯಾನಂದ ವಿದೇಶಕ್ಕೆ ಪರಾರಿಯಾಗಿದ್ದಾನೆ.
ಆದರೆ ಈ ವದಂತಿಯನ್ನು ಆತನ ಅನುಯಾಯಿಗಳು ತಳ್ಳಿಹಾಕಿದ್ದು, ನಿತ್ಯಾನಂದ ಸ್ವಾಮಿ ತಪಸ್ಸಿಗಾಗಿ ಉತ್ತರ ಭಾರತಕ್ಕೆ ತೆರಳಿದ್ದಾರೆ ಎಂದು ಹೇಳಿದ್ದಾರೆ. ಆದರೆ ಗುಜರಾತ್ ಪೊಲೀಸರು ಆತ ದೇಶ ಬಿಟ್ಟು ಪರಾರಿಯಾಗಿರುವುದನ್ನು ಖಚಿತಪಡಿಸಿದ್ದಾರೆ. ನಿತ್ಯಾನಂದ ವಿದೇಶಕ್ಕೆ ತೆರಳಿದ್ದು, ಅಗತ್ಯಬಿದ್ದರೆ ಆತನನ್ನು ಬಂಧಿಸಿ ವಿಚಾರಣೆ ನಡೆಸುತ್ತಾರೆ ಎಂದು ಅಹ್ಮದಾಬಾದ್ ಗ್ರಾಮೀಣ ಎಸ್ ಪಿ ಆರ್ ವಿ ಅಸರಿ ತಿಳಿಸಿದ್ದಾರೆ. ಅಲ್ಲದೆ ಆತನಿಗಾಗಿ ಭಾರತದಲ್ಲಿ ಹುಡುಕುವುದು ಸಮಯ ವ್ಯರ್ಥ ಎಂದು ಅವರು ಹೇಳಿದ್ದಾರೆ.
ನಿತ್ಯಾನಂದನ ಇಬ್ಬರು ಶಿಷ್ಯರನ್ನು ಈಗಾಗಲೇ ಬಂಧಿಸಿ ವಿಚಾರಣೆ ನಡೆಸಲಾಗುತ್ತಿದೆ. ಅಹಮದಾಬಾದ್ನಲ್ಲಿರುವ ಯೋಗಿನಿ ಸರ್ವಜ್ಞಪೀಠಂ ಆಶ್ರಮದಲ್ಲಿ ನಡೆಸಲು ಅನುಯಾಯಿಗಳಿಂದ ಹಣ ಸಂಗ್ರಹಿಸಲು ಇಬ್ಬರು ಮಕ್ಕಳನ್ನು ಅಪಹರಿಸಿ ಬಂಧಿಸಿಟ್ಟ ಆರೋಪದ ಮೇಲೆ ಈಗಾಗಲೇ ನಿತ್ಯಾನಂದನ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ. ಇನ್ನೊಂದೆಡೆ ನಿತ್ಯಾನಂದ ಸ್ವಾಮಿ ಬಿಡದಿ ನ್ಯಾಯಾಲಯಕ್ಕೂ 6 ತಿಂಗಳಿನಿಂದ ವಿಚಾರಣೆಗೆ ಹಾಜರಾಗದೆ ತಪ್ಪಿಸಿಕೊಳ್ಳುತ್ತಿದ್ದಾರೆ.