ಬೆಂಗಳೂರು, ನ 22 (Daijiworld News/MSP): ಕಾಂಗ್ರೆಸ್ ಶಾಸಕ ತನ್ವೀರ್ ಸೇಠ್ ಮೇಲೆ ಹತ್ಯೆ ಯತ್ನ ನಡೆಸಿ ಪೊಲೀಸರ ಅತಿಥಿಯಾದ ಆರೋಪಿ ಫರಾನ್ ಪಾಷಾನ ಒಂದೊಂದೆ ವಿಚಾರಗಳು ಬೆಳಕಿಗೆ ಬರುತ್ತಿದ್ದು, ಹಲ್ಲೆಗೂ ಮುನ್ನ ಈತ ಶ್ವಾನಗಳ ಕತ್ತು ಸೀಳಿ ತರಬೇತಿ ಪಡೆದುಕೊಂಡಿದ್ದ ಎಂಬ ಆತಂಕಕಾರಿ ವಿಚಾರ ಬೆಳಕಿಗೆ ಬಂದಿದೆ.
ಈ ಹಿಂದೆ ಮೂರು ಬಾರಿ ಶಾಸಕರ ಕೊಲೆಗೆ ಯತ್ನಿಸಿ ಫೇಲ್ ಆಗಿದ್ದ ಫರಾನ್ ಪಾಷಾ ತಂಡ ನಾಯಿಗಳ ಕತ್ತು ಮನುಷ್ಯರ ಕುತ್ತಿಗೆಯಿಂದ ಗಟ್ಟಿಯೆಂಬ ಕಾರಣಕ್ಕೆ ನಾಯಿಗಳ ಕತ್ತು ಸೀಳಿ ತರಬೇತಿ ಪಡೆದುಕೊಂಡಿತ್ತು ಎಂದು ಹೇಳಲಾಗಿದೆ.
ಬನ್ನಿಮಂಟಪ ಸ್ಟೇಡಿಯಂನಲ್ಲಿ ನಡೆಯುತ್ತಿದ್ದ ಆರತಕ್ಷತೆಯಲ್ಲಿ ಆಸೀನರಾಗಿದ್ದ ತನ್ವೀರ್ ಸೇಠ್ ಅವರನ್ನು ಹತ್ಯೆ ಮಾಡಲು ಯತ್ನ ನಡೆಸಿ ಪೊಲೀಸರ ಪಾಲಾಗಿದ್ದ.
ಇನ್ನೊಂದೆಡೆ ಹಲ್ಲೆಗೆ ಒಳಗಾಗಿ ಕೊಲಂಬಿಯಾ ಏಷಿಯಾ ಆಸ್ಪತ್ರೆಗೆ ದಾಖಲಾಗಿರುವ ಶಾಸಕ ತನ್ವೀರ್ ಸೇಠ್ ಅವರ ತುಂಡರಿಸಿದ್ದ ಕಿವಿಯ ಭಾಗದ ಮರುಜೋಡಣೆ ವಿಫಲವಾಗಿದ್ದು ಅದನ್ನು ತೆಗೆದುಹಾಕಲಾಗಿದೆ ಎಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ.