ಬೆಂಗಳೂರು, ನ 22 (Daijiworld News/MSP): 15 ವಿಧಾನಸಭಾ ಕ್ಷೇತ್ರಗಳಿಗೆ ಡಿಸೆಂಬರ್ 5ರಂದು ನಡೆಯಲಿರುವ ಉಪ ಚುನಾವಣೆಗೆ ದಿನಗಣನೆ ಆರಂಭವಾಗುತ್ತಿದ್ದಂತೆ ಪ್ರಚಾರ ಭರಾಟೆ ಕಾವು ಪಡೆದುಕೊಂಡಿದ್ದು, ರಾಜಕೀಯ ನಾಯಕರ ನಡುವೆ ವಾಕ್ಸಮರ , ಆರೋಪ - ಪ್ರತ್ಯಾರೋಪ ಜೋರಾಗಿದೆ.
ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯನವರು ಮಾನಸಿಕ ಸ್ಥಿಮಿತ ಕಳೆದು ಕೊಂಡಿದ್ದಾರೆ. ದೇಶದಲ್ಲಿ ಕಾಂಗ್ರೆಸ್ ದಯನೀಯ ಸ್ಥಿತಿಗೆ ತಲುಪಿದ್ರು ಸಿದ್ದರಾಮಯ್ಯನವರಿಗೆ ಮಾತ್ರ ಬುದ್ದಿ ಬಂದಿಲ್ಲ ಎಂಬ ಕೇಂದ್ರ ಸಚಿವ ಡಿ.ವಿ. ಸದಾನಂದ ಗೌಡ ನೀಡಿರುವ ಹೇಳಿಕೆಗೆ ಕೆಂಡಾಮಂಡಲವಾಗಿರುವ ಸಿದ್ದರಾಮಯ್ಯ, ಟ್ವೀಟ್ ಮೂಲಕ ತಿರುಗೇಟು ನೀಡಿದ್ದಾರೆ. " ಏಕಾಂಗಿಯಾಗಿ ಹೋಗಿರುವ ಸದಾನಂದಗೌಡ ಅವರನ್ನು ಕರ್ನಾಟಕ ಬಿಜೆಪಿಯಲ್ಲಿ ಯಾರೂ ಗಂಭೀರವಾಗಿ ಸ್ವೀಕರಿಸುತ್ತಿಲ್ಲ. ಇದಕ್ಕಾಗಿ ಅವರು ತಮ್ಮ ಜೋಕುಗಳಿಗೆ ತಾವೇ ನಕ್ಕು ರಾಜ್ಯದ ಜನರಿಗೆ ಮನರಂಜನೆ ನೀಡುತ್ತಿರುತ್ತಾರೆ ಎಂದು ಸಿದ್ದರಾಮಯ್ಯ ವ್ಯಂಗ್ಯವಾಡಿದ್ದಾರೆ."
"ನನ್ನ ಮಾನಸಿಕ ಸ್ಥಿತಿ ಬಗ್ಗೆ ಬಡಬಡಿಸುತ್ತಿರುವ ಸದಾನಂದಗೌಡರ ಬಗ್ಗೆ ಅನುಕಂಪವಿದೆ. ಮೊದಲು ಮುಖ್ಯಮಂತ್ರಿ ಸ್ಥಾನದಿಂದ ನಂತರ ರೈಲ್ವೆ, ಕಾನೂನು, ಅಂಕಿಅಂಶ ಹೀಗೆ ಎಲ್ಲ ಕಡೆಗಳಲ್ಲಿಯೂ ತಿರಸ್ಕೃತಗೊಂಡ ಗೌಡರು ಈಗ ಪಕ್ಷದಲ್ಲಿ ಗೊಬ್ಬರವಾಗಿ ಹೋಗಿದ್ದಾರೆ. ಈ ಹತಾಶೆ ಅವರಿಂದ ಇಂತಹ ಹೇಳಿಕೆಗಳನ್ನು ಹೊರಡಿಸುತ್ತಿದೆ "ಎಂದು ಸಿದ್ದರಾಮಯ್ಯ ಲೇವಡಿ ಮಾಡಿದ್ದಾರೆ.
ಸಿದ್ದರಾಮಯ್ಯ ಟ್ವೀಟ್ಗೆ ಪ್ರತಿಕ್ರಿಯಿಸಿರುವ ಸದಾನಂದ ಗೌಡ, ನಾವು ತಿನ್ನುವ ಅನ್ನ ಗೊಬ್ಬರದಿಂದಲೇ ಬೆಳೆಯಲ್ಪಡುತ್ತದೆ. ಗೊಬ್ಬರವನ್ನು ಹೀಯಾಳಿಸುವ ಮೂಲಕ ರೈತರನ್ನು ಕೇವಲವಾಗಿ ಕಂಡಿದ್ದೀರಿ. ಪ್ರಚಾರಕ್ಕಾಗಿ ದಿನಕ್ಕೊಂದು ಹೇಳಿಕೆ ನೀಡುವುದು ಸಮತೋಲನವಿಲ್ಲದ ತಮ್ಮ ಮನಸ್ಥಿತಿಯನ್ನು ತೋರಿಸುತ್ತದೆ, ಎಂದು ಹೀಯಾಳಿಸಿದ್ದಾರೆ. ನಾವು ತಿನ್ನುವ ಅನ್ನ ಗೊಬ್ಬರದಿಂದಲೇ.. ಗೊಬ್ಬರವನ್ನು ಹೀಯಾಳಿಸುವ ಮೂಲಕ ರೈತರನ್ನು ಕೇವಲವಾಗಿ ಕಂಡಿದ್ದೀರಿ. ಪ್ರಚಾರಕ್ಕಾಗಿ ದಿನಕ್ಕೊಂದು ಹೇಳಿಕೆ ನೀಡುವುದು ಸಮತೋಲನವಿಲ್ಲದ ತಮ್ಮ ಮನಸ್ಥಿತಿಯನ್ನು ತೋರಿಸುತ್ತದೆ ಎಂದು ಟ್ವೀಟ್ ಮೂಲಕ ತಿರುಗೇಟು ನೀಡಿದ್ದಾರೆ.