ಕಲಬುರಗಿ, ನ.23(Daijiworld News/SS): ಕಲಬುರಗಿ ವಿಮಾನ ನಿಲ್ದಾಣ ಪ್ರಯಾಣಿಕರ ಸಾಗಾಟಕ್ಕೆ ಮಾತ್ರ ಬಳಕೆಯಾದರೆ ಸಾಲದು. ಬದಲಿಗೆ ವಾಣಿಜ್ಯ ಉದ್ದೇಶಕ್ಕೂ ಬಳಕೆಯಾಗಬೇಕು ಎಂದು ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಹೇಳಿದರು.
ವಿಮಾನ ನಿಲ್ದಾಣ ಲೋಕಾರ್ಪಣೆಗೊಳಿಸಿ ಮಾತನಾಡಿದ ಸಿಎಂ, ಬಹುದಿನಗಳ ಬೇಡಿಕೆಯಾದ ಕಲಬುರಗಿ ವಿಮಾನ ನಿಲ್ದಾಣದ ಕನಸು ಸಾಕಾರಗೊಂಡಿದ್ದು, ಭವಿಷ್ಯದಲ್ಲಿ ಈ ವಿಮಾನ ನಿಲ್ದಾಣವನ್ನು ಸರಕು ಸಾಗಾಣಿಕೆಗೂ ಬಳಕೆಯಾಗಬೇಕು. ಒಟ್ಟು 3.175 ಕಿ.ಮಿ. ಉದ್ದದ ರನ್ ವೇ ಹೊಂದಿರುವ ಕಲಬುರಗಿ ವಿಮಾನ ನಿಲ್ದಾಣ ರಾಜ್ಯದ 2ನೇ ಹಾಗೂ ದೇಶದ 10ನೇ ಅತಿ ಉದ್ದದ ರನ್ ವೇ ಹೊಂದಿರುವ ಹೆಗ್ಗಳಿಕೆಗೆ ಪಾತ್ರವಾಗಿದೆ. ಇಂತಹ ವಿಮಾನ ಸರ್ವ ರೀತಿಯಲ್ಲೂ ಸದ್ಬಳಕೆಯಾಗಬೇಕು ಎಂದು ಹೇಳಿದರು.
ಈ ವಿಮಾನ ನಿಲ್ದಾಣವನ್ನು ಭವಿಷ್ಯದಲ್ಲಿ ಸರಕು ಸಾಗಣೆಗೂ ಬಳಸಿಕೊಳ್ಳುವಂತೆ ನಾನು ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿಕೊಳ್ಳುತ್ತೇನೆ. ದೇಶಕ್ಕೆ ಅಗತ್ಯವಾಗಿರುವ ಶೇ.30 ರಷ್ಟು ತೊಗರಿ ಉತ್ಪಾದಿಸುವ ಮತ್ತು ಸಿಮೆಂಟ್ ರಫ್ತಿನಿಂದ ಕಲಬುರಗಿ ಜಿಲ್ಲೆ ವಿಶ್ವದಾದ್ಯಂತ ಗಮನ ಸೆಳೆದಿದೆ ಎಂದು ಹೇಳಿದರು.