ಲತೇಹಾರ್, ನ.23(Daijiworld News/SS): ಲುಕೈಯಾ ಗ್ರಾಮದಲ್ಲಿ ನಕ್ಸಲರ ಹಾವಳಿ ಮಿತಿಮೀರಿದ್ದು, ಇಲ್ಲಿ ನಡೆದ ಘರ್ಷಣೆಯಲ್ಲಿ ಸಹಾಯಕ ಪೊಲೀಸ್ ಸಬ್ ಇನ್ಸ್'ಪೆಕ್ಟರ್ ಸೇರಿದಂತೆ ಮೂವರು ಪೊಲೀಸರು ಹುತಾತ್ಮರಾಗಿದ್ದಾರೆ.
ಜಾರ್ಖಂಡ್ ರಾಜ್ಯದಲ್ಲಿ ವಿಧಾನಸಭಾ ಚುನಾವಣೆಗೆ ಕೇವಲ 8 ದಿನಗಳು ಬಾಕಿ ಇರುವಾಗಲೇ ನಕ್ಸಲೀಯರು ಪೊಲೀಸ್ ಗಸ್ತು ಸಿಬ್ಬಂದಿಯ ಮೇಲೆ ದಾಳಿ ಮಾಡುವ ಮೂಲಕ ತಮ್ಮ ಅಸ್ತಿತ್ವವನ್ನು ಮತ್ತೊಮ್ಮೆ ಮೆರೆದಿದ್ದಾರೆ. ಹಿರಿಯ ಪೊಲೀಸ್ ಅಧಿಕಾರಿಗಳು ಎಂದಿನಂತೆ ಹೆದ್ದಾರಿ ಗಸ್ತು ಭಾಗವಾಗಿ ರಾಂಚಿ ರಸ್ತೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾಗ ಚಾಂಡ್ವಾ ಪೊಲೀಸ್ ಠಾಣೆಯ ವ್ಯಾಪ್ತಿಯ ಲುಕೈಯಾ ಗ್ರಾಮದಲ್ಲಿ ನಕ್ಸಲರು ಇದ್ದಕ್ಕಿದ್ದಂತೆ ಪೊಲೀಸ್ ವಾಹನದ ಮೇಲೆ ಗುಂಡು ಹಾರಿಸಿದ್ದಾರೆ. ಪೊಲೀಸರು ಇದಕ್ಕೆ ಪ್ರತೀಕಾರವಾಗಿ ಗುಂಡು ಹಾರಿಸಿದ್ದಾರೆ.
ಈ ವೇಳೆ ಎಎಸ್'ಐ ಸುಕ್ರ ಒರಾನ್ ಸೇರಿದಂತೆ ಮೂವರು ಪೊಲೀಸರು ಹುತಾತ್ಮರಾಗಿದ್ದಾರೆ. ಹಲವರು ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ.