ಮುಂಬೈ, ನ 23 (Daijiworld News/MB) : ಅಧಿಕಾರಕ್ಕಾಗಿ ಮಹಾರಾಷ್ಟ್ರದಲ್ಲಿ ನಡೆಯುತ್ತಿದ್ದ ರಾಜಕೀಯದಾಟಕ್ಕೆ ತೆರೆಬಿದಿದ್ದುಅಚ್ಚರಿಯ ಬೆಳವಣಿಗೆಯಲ್ಲಿ ಬಿಜೆಪಿ ಮತ್ತು ಎನ್ ಸಿ ಪಿ ಮೈತ್ರುಕೂಟ ಆಡಳಿತದ ಚುಕ್ಕಾಣಿ ಹಿಡಿದಿದೆ. ಆದರೆ ಶನಿವಾರ ರಾತ್ರಿಯವರೆಗೆ ಶಿವಸೇನೆ- ಎನ್ ಸಿಪಿ- ಕಾಂಗ್ರೆಸ್ ಮೈತ್ರಿಕೂಟದ ಸರಕಾರ ರಚನೆ ಆಗಲಿದ್ದು ಉದ್ಧವ್ ಠಾಕ್ರೆ ಮುಖ್ಯಮಂತ್ರಿಯಾಗುತ್ತಾರೆ ಎಂದು ಬಹುತೇಕ ಖಚಿತವಾಗಿತ್ತು. ದಿನಬೆಳಗಾಗುತ್ತಿದ್ದಂತೆ ಬಿಜೆಪಿಯ ದೇವೆಂದ್ರ ಫಡ್ನವೀಸ್ ಮುಖ್ಯಮಂತ್ರಿಯಾಗಿ ಹಾಗೂ ಎನ್ ಸಿಪಿ ಮುಖಂಡ ಅಜಿತ್ ಪವಾರ್ ಉಪಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕಾರ ಮಾಡಿದ್ದಾರೆ.
ಇತ್ತೀಚಿಗಷ್ಟೇ ಕೇಂದ್ರ ಸಚಿವ ನಿತಿನ್ ಗಡ್ಕರಿ “ರಾಜಕೀಯ ಮತ್ತು ಕ್ರಿಕೆಟ್ ನಲ್ಲಿ ಏನೂ ಆಗಬಹುದು. ನಮ್ಮ ಲೆಕ್ಕಾಚಾರ ಯಾವ ಹಂತದಲ್ಲೂ ತಲೆಕೆಳಗಾಗಬಹುದು” ಎಂದು ಹೇಳಿದ ಮಾತು ಈಗ ನಿಜವಾಗಿದ್ದು ಶಿವಸೇನೆ- ಎನ್ ಸಿಪಿ- ಕಾಂಗ್ರೆಸ್ ಮೈತ್ರಿಕೂಟದ ಬದಲಾಗಿ ಬಿಜೆಪಿ ಹಾಗೂ ಎನ್ ಸಿ ಪಿ ಮೈತ್ರಿಕೂಟದ ಸರಕಾರ ರಚನೆಯಾಗಿದೆ.
ಆದರೆ ಈ ಮೈತ್ರಿಗೆ ಎನ್ ಸಿಪಿ ಮುಖಂಡ ಶರದ್ ಪವಾರ್ ಒಪ್ಪಿಗೆ ನೀಡಿಲ್ಲ, ಶರದ್ ಪವಾರ್ ಸಂಬಂಧಿ ಅಜಿತ್ ಪವಾರ್ ಅವರು 20ಕ್ಕೂ ಹೆಚ್ಚು ಶಾಸಕರ ಜೊತೆಗೆ ಬಿಜೆಪಿಗೆ ಬೆಂಬಲ ನೀಡಿದ್ದಾರೆ ಎಂಬ ಮಾತು ಕೇಳಿ ಬರುತ್ತಿದೆ.
ಈ ಕುರಿತು ಟ್ವೀಟ್ ಮಾಡಿರುವ ಶರದ್ ಪವಾರ್, ಅಜಿತ್ ಪವಾರ್ ಅವರು ತಮ್ಮ ವೈಯಕ್ತಿಕ ನಿರ್ಧಾರದಲ್ಲಿ ಬಿಜೆಪಿ ಜೊತೆ ಮೈತ್ರಿ ಸರಕಾರ ರಚನೆಗೆ ಒಪ್ಪಿಗೆ ನೀಡಿದ್ದಾರೆ. ಇದು ಎನ್ ಸಿಪಿ ಪಕ್ಷದ ನಿರ್ಧಾರವಲ್ಲ. ಈ ನಿರ್ಧಾರವನ್ನು ನಾವು ಬೆಂಬಲ ಅಥವಾ ಅನುಮೋದನೆ ಮಾಡುವುದಿಲ್ಲ. ಈ ಕುರಿತು ಎನ್ ಸಿಪಿ ನಾಯಕರುಗಳಾದ ಪ್ರಫುಲ್ಲ್ ಪಟೇಲ್, ಛಗನ್ ಭುಜ್ಬಲ್, ನವಾಬ್ ಮಲಿಕ್, ಜಯಂತ್ ಪಾಟೀಲ್ ಅವರಿಗೆ ಕೂಡಾ ಏನೂ ಮಾಹಿತಿ ಇಲ್ಲ ಎಂದು ಹೇಳಿದ್ದಾರೆ.
ವಿಧಾನಸಭಾ ಚುನಾವಣೆಯ ವೇಳೆ ಎನ್ ಸಿಪಿ, ಕಾಂಗ್ರೆಸ್ ಜೊತೆ ಮೈತ್ರಿ ಮಾಡಿದ್ದು ಫಲಿತಾಂಶದ ನಂತರ ಶಿವಸೇನೆ ಜೊತೆ ಸರ್ಕಾರ ರಚಿಸುವ ಮನಸ್ಸು ಮಾಡಿ ಇದೀಗ ಬಿಜೆಪಿ- ಎನ್ ಸಿ ಪಿ ಮೈತ್ರಿ ಸರಕಾರ ರಚನೆಯಾಗಿದೆ. ಈ ನಡುವೆ ಅಜಿತ್ ಪವಾರ್ ಮತ್ತು ಪಕ್ಷದ ಕೆಲ ಶಾಸಕರು ಬಿಜೆಪಿ ಆಪರೇಶನ್ ಗೆ ಒಳಗಾಗಿದ್ದಾರೆ ಎಂಬ ಮಾತು ಕೇಳಿಬರುತ್ತಿದೆ.
ಇಂದು ಮುಂಜಾನೆ 5.47ಕ್ಕೆ ರಾಷ್ಟ್ರಪತಿ ಆಡಳಿತವನ್ನು ತೆರವು ಮಾಡಲಾಗಿದ್ದು ಇವೆಲ್ಲವೂ ಪೂರ್ವ ನಿಯೋಜಿತವಾಗಿದೆ, ಈ ಅಚ್ಚರಿಯ ಬೆಳವಣಿಗೆಗಳು ಬಿಜೆಪಿ ಕೇಂದ್ರ ನಾಯಕರ ಸಹಾಯದಿಂದಲೇ ನಡೆದಿವೆ ಎಂಬ ಮಾತುಗಳು ಕೂಡಾ ಕೇಳಿ ಬರುತ್ತಿವೆ.
ಚುನಾವಣೆಯಲ್ಲಿ ಶಿವಸೇನೆಗಿಂತ ಕೇವಲ ಎರಡು ಸ್ಥಾನಗಳನ್ನು ಕಡಿಮೆ (54) ಗಳಿಸಿದ್ದ ಎನ್ ಸಿಪಿ ಮಹಾರಾಷ್ಟ್ರದಲ್ಲಿ ಕಿಂಗ್ ಮೇಕರ್ ರೀತಿಯೇ ಕೆಲಸ ಮಾಡಿದ್ದು ಎನ್ ಸಿ ಪಿ ನಾಯಕ ಶರದ್ ಪವಾರ್ ಅವರು ಎನ್ ಸಿ ಪಿ ಬಿಜೆಪಿ ಮೈತ್ರಿಗೆ ಪಕ್ಷದ ಬೆಂಬಲ ಇಲ್ಲ ಎಂದು ಹೇಳಿರುವುದು ಇನ್ನೊಂದು ಕುತೂಹಲ ಮೂಡಿಸಿದೆ.
ಹಾಗಾಗೀ ಬೇರೆ ಬೇರೆ ಸಿದ್ಧಾಂತವಿರುವ ಪಕ್ಷಗಳ ಮೈತ್ರಿ ಸರಕಾರ ಉಳಿಯುತ್ತಾ ಎನ್ನುವ ಅನುಮಾನವು ಇದೆ.