ಮುಂಬೈ, ನ 23 (Daijiworld News/MB) : ಮಹಾರಾಷ್ಟ್ರದಲ್ಲಿ ಉಪಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ಎನ್ಸಿಪಿ ನಾಯಕ ಅಜಿತ್ ಪವಾರ್ ಅವರನ್ನು ಪಕ್ಷದ ನಿರ್ಧಾರಕ್ಕೆ ವಿರುದ್ಧವಾಗಿ ಬಿಜೆಪಿ ಸರಕಾರಕ್ಕೆ ಬೆಂಬಲ ನೀಡಿದ ಕಾರಣಕ್ಕೆ ಪಕ್ಷದ ಶಾಸಕಾಂಗ ನಾಯಕತ್ವದಿಂದ ವಜಾಗೊಳಿಸಲಾಗಿದೆ.
ಅಜಿತ್ ಪವಾರ್ ಅವರು ಪಕ್ಷದ ಮುಖ್ಯಸ್ಥ ಶರದ್ ಪವಾರ್ ಅವರ ಬೆಂಬಲವಿಲ್ಲದೆ 20ಕ್ಕೂ ಹೆಚ್ಚು ಶಾಸಕರೊಂದಿಗೆ ಬಿಜೆಪಿಗೆ ಬೆಂಬಲ ನೀಡಿ ಇಂದು ಬೆಳಿಗ್ಗೆ ಬಿಜೆಪಿ-ಎನ್ಸಿಪಿ ಮೈತ್ರಿ ಸರಕಾರ ರಚನೆಯಾಗಿದೆ.
ಈ ನಂತರ ಶರದ್ ಪವಾರ್ ಅವರು ಟ್ವೀಟ್ ಮಾಡಿ "ಅಜಿತ್ ಪವಾರ್ ಅವರು ತಮ್ಮ ವೈಯಕ್ತಿಕ ನಿರ್ಧಾರದಲ್ಲಿ ಬಿಜೆಪಿ ಜೊತೆ ಮೈತ್ರಿ ಸರಕಾರ ರಚನೆಗೆ ಒಪ್ಪಿಗೆ ನೀಡಿದ್ದಾರೆ. ಇದು ಎನ್ ಸಿಪಿ ಪಕ್ಷದ ನಿರ್ಧಾರವಲ್ಲ. ಈ ನಿರ್ಧಾರವನ್ನು ನಾವು ಬೆಂಬಲ ಅಥವಾ ಅನುಮೋದನೆ ಮಾಡುವುದಿಲ್ಲ. ಈ ಕುರಿತು ಎನ್ ಸಿಪಿ ನಾಯಕರುಗಳಾದ ಪ್ರಫುಲ್ಲ್ ಪಟೇಲ್, ಛಗನ್ ಭುಜ್ಬಲ್, ನವಾಬ್ ಮಲಿಕ್, ಜಯಂತ್ ಪಾಟೀಲ್ ಅವರಿಗೆ ಕೂಡಾ ಏನೂ ಮಾಹಿತಿ ಇಲ್ಲ"ಎಂದು ಹೇಳಿದ್ದರು.
ಈ ರಾಜಕೀಯ ಬೆಳವಣಿಗೆ ಹಿನ್ನಲೆಯಲ್ಲಿ ಶರದ್ ಪವಾರ್ ಪುತ್ರಿ ಸಂಸದೆ ಸುಪ್ರಿಯಾ ಸುಲೆ 'ಒಡೆದ ಕುಟುಂಬ ಮತ್ತು ಪಕ್ಷ' ಎಂದು ವಾಟ್ಸಪ್ ಸ್ಟೇಟಸ್ ಹಾಕಿಕೊಂಡಿದ್ದಾರೆ.