ಬೆಂಗಳೂರು, ನ 23 (Daijiworld News/MSP): ಸ್ವಯಂಘೋಷಿತ ದೇವಮಾನವ ನಿತ್ಯಾನಂದ ಆಶ್ರಮದಲ್ಲಿ ತನಗೆ ಮಾನಸಿಕ ಹಿಂಸೆ ನೀಡಲಾಗುತ್ತಿತ್ತು ಎಂದು ನಿತ್ಯಾನಂದ ಆಶ್ರಮದಿಂದ ರಕ್ಷಿಸಲ್ಪಟ್ಟ ಬೆಂಗಳೂರಿನ ಬಾಲಕಿ ಹೇಳಿಕೆ ನೀಡಿದ್ದಾಳೆ.
ತಮ್ಮ ಇಬ್ಬರು ಮಕ್ಕಳನ್ನು ನಿತ್ಯಾನಂದನ ಆಶ್ರಮದಲ್ಲಿ ಬಿಟ್ಟಿದ್ದು, ಆದರೆ ಬಳಿಕ ಮಕ್ಕಳು ನಾಪತ್ತೆಯಾಗಿದ್ದಾರೆ. ಆಶ್ರಮದಲ್ಲಿ ಇದಕ್ಕೆ ಸೂಕ್ತ ಉತ್ತರ ಸಿಗುತ್ತಿಲ್ಲ, ಮಕ್ಕಳನ್ನು ಕಿಡ್ನಾಪ್ ಮಾಡಿ ಅಹಮದಬಾದಿನ ಆಶ್ರಮಕ್ಕೆ ಕಳುಹಿಸಲಾಗಿದೆ ಎಂದು ಆರೋಪಿಸಿ ಗುಜರಾತಿನಲ್ಲಿ ಬೆಂಗಳೂರು ದಂಪತಿ ದೂರಿದ್ದರು.
ಈ ನಡುವೆ ಅಪಹರಣ ಆಗಿದೆ ಎನ್ನಲಾದ ಓರ್ವ ಯುವತಿಯ ವಿಡೀಯೋ ವೈರಲ್ ಆಗಿದ್ದು, " ತನ್ನನ್ನು ಯಾರು ಅಪಹರಿಸಿಲ್ಲ, ತಾನು ಸ್ವ ಇಚ್ಚೆಯಿಂದ ಸನ್ಯಾಸತ್ವ ಸ್ವೀಕರಿಸಿದ್ದೇನೆ, ನಾನು ನನ್ನ ಸಹೋದರಿ ಆಶ್ರಮದಲ್ಲೇ ಇದ್ದೇವೆ ಎಂದಿರುವ ವಿಡಿಯೋ ವೈರಲ್ ಆಗಿತ್ತು. ಪೊಲೀಸರು ನಿತ್ಯಾನಂದನ ಬಲೆಗೆ ಕೆಡವಲು ಮುಂದಾದಗ ಆತನ ಭಾರತದಿಂದ ಎಸ್ಕೇಪ್ ಆಗಿರುವ ವಿಚಾರ ಬಯಲಾಗಿತ್ತು.
ಇದೀಗ ರಕ್ಷಿಸಿದ ಬಾಲಕಿ ತಾವು ನಿತ್ಯಾನಂದ ಆಶ್ರಮ ಸೇರಿದ್ದು ಯಾವಾಗ, ಅಲ್ಲಿ ಯಾವ ರೀತಿ ತನ್ನನ್ನು ನಡೆಸಿಕೊಳ್ಳುತ್ತಿದ್ದರು ಎಂಬುದನ್ನು ವಿವರವಾಗಿ ಮಾಧ್ಯಮವೊಂದಕ್ಕೆ ವಿವರಿಸಿದ್ದಾಳೆ.
ತಾನು 2013ರ ಮೇ ತಿಂಗಳಿನಲ್ಲಿ ಗುರುಕುಲಸೇರಿದ್ದು, ಮೊದಮೊದಲು ಮನೋರಂಜನಾ ಕಾರ್ಯಕ್ರಮಗಳು ನಡೆಯುತ್ತಿತ್ತು, 2017ರ ಬಳಿಕ ಭ್ರಷ್ಟಾಚಾರ ಬೆಳಕಿಗೆ ಬಂದಿತ್ತು. ಆ ಬಳಿಕ ಆಶ್ರಮಕ್ಕೆ ದೇಣಿಗೆ ಸಂಗ್ರಹಿಸುವ ಪ್ರಮೊಷನಲ್ ಕೆಲಸಕ್ಕೆ ಹೆಚ್ಚು ಒತ್ತುನೀಡಲಾಗುತ್ತಿತ್ತು. ದೇಣಿಗೆ ಎಂದರೆ ಅದು ಸಣ್ಣ ಪ್ರಮಾಣದಲ್ಲ. ದೇಣಿಗೆ 3 ಲಕ್ಷ ರೂ.ನಿಂದ ಆರಂಭವಾಗಿ 8 ಲಕ್ಷದವರೆಗೂ ಇರುತ್ತಿತ್ತು. ಜಮೀನಾದರೂ ದೇಣಿಗೆಯಲ್ಲಿ ನೀಡಬಹುದಿತ್ತು.
ಆ ಬಳಿಕ ಮಧ್ಯರಾತ್ರಿ ಎಬ್ಬಿಸಿ ಸ್ವಾಮೀಜಿಗಾಗಿ ವಿಡಿಯೋ ಮಾಡುವಂತೆ ಒತ್ತಾಯ ಮಾಡುತ್ತಿದ್ದರು. ವಿಡಿಯೋ ಶೂಟಿಂಗಿಗಾಗಿ ಆಭರಣಗಳನ್ನು ಧರಿಸಿ ಮೇಕಪ್ ಮಾಡಿ ನಡೆಸಿಕೊಡಬೇಕಾಗಿತ್ತು. ಇದೆಲ್ಲವನ್ನು ನನ್ನ ಅಕ್ಕನೇ ಮಾಡುತ್ತಿದ್ದಳು. ಮಾತ್ರವಲ್ಲದೇ ಕೇಸು ನೀಡಿದ ಹೆತ್ತವರ ವಿರುದ್ಧ ಹೇಳಿಕೆ ನೀಡುವಂತೆ ಒತ್ತಾಯಿಸುತ್ತಿದ್ದರು.ನಾನು ಇದನ್ನು ನಿರಾಕರಿಸಿದಾಗ ಎರಡು ತಿಂಗಳುಗಳ ನನ್ನನ್ನು ಕೊಠಡಿಯೊಂದರಲ್ಲಿ ಬಂಧಿಸಿಡಲಾಗಿತ್ತು. ಅಶ್ರಮದಲ್ಲಿದ್ದವರು ನನ್ನನ್ನು ಕೀಳಾಗಿ ಕಾಣುತ್ತಿದ್ದರು, ಕೆಟ್ಟಶಬ್ದಗಳಿಂದ ನಿಂದಿಸುತ್ತಿದ್ದರು ಎಂದು ಹೇಳಿದ್ದಾಳೆ.