ನವದೆಹಲಿ, ನ 23 (Daijiworld News/MB) : ದೇಶದ ಪ್ರಸ್ತುತ ಆರ್ಥಿಕತೆಯ ಬೆಳವಣಿಗೆ ದರದಲ್ಲಿ 2025ರ ವೇಳೆಗೆ 5 ಟ್ರಿಲಿಯನ್ ಡಾಲರ್ ಜಿಡಿಪಿ ಗುರಿ ತಲುಪಲು ಕಷ್ಟವಿದೆ ಎಂದು ಭಾರತೀಯ ರಿಸರ್ವ್ ಬ್ಯಾಂಕ್ನ ಮಾಜಿ ಗವರ್ನರ್ ಸಿ. ರಂಗರಾಜನ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
6 ವರ್ಷಗಳಿಗಿಂತ ಪ್ರಸಕ್ತ ಹಣಕಾಸು ವರ್ಷದ ಮೊದಲ ತ್ತೈಮಾಸಿಕ ಬೆಳವಣಿಗೆಯು ಕನಿಷ್ಠ ಮಟ್ಟದಲ್ಲಿದೆ. ಶೇಕಡ 5 ಕ್ಕೆ ಇಳಿದಿದೆ. 2ನೇ ತ್ತೈಮಾಸಿಕದಲ್ಲಿ ಬೆಳವಣಿಗೆಯ ಮುನ್ಸೂಚನೆ ಇದ್ದರೂ ದರ ಮಾತ್ರ ಶೇ 4.3ರಷ್ಟಿದೆ. ಆರ್ಬಿಐ ಸಹ ತನ್ನ ಬೆಳವಣಿಗೆ ಅಂದಾಜನ್ನು ಎರಡು ತಿಂಗಳಲ್ಲಿ 90 ಬಿಪಿಎಸ್ಯಿಂದ ಅಕ್ಟೋಬರ್ ನೀತಿ ಪರಿಶೀಲನೆಯಲ್ಲಿ ಶೇ.6.1ಕ್ಕೆ ಇಳಿಸಿದೆ.
ಪ್ರಧಾನಿ ನರೇಂದ್ರ ಮೋದಿ ಸರಕಾರ 2025ರ ವೇಳೆಗೆ ದೇಶದ ಆರ್ಥಿಕತೆಯನ್ನು 5 ಟ್ರಿಲಿಯನ್ ಡಾಲರ್ ಗೆ ಹೆಚ್ಚಿಸಲು ಗುರಿ ಹೊಂದಿದ್ದು, ಪ್ರಸಕ್ತ ಆರ್ಥಿಕ ಕ್ಷೇತ್ರದಲ್ಲಿನ ಬೆಳವಣಿಗೆ ಗಮನಿಸಿದರೆ ಗುರಿ ತಲುಪಲು ಸಾಧ್ಯವಿಲ್ಲ ಎಂದು ರಂಗರಾಜನ್ ಹೇಳಿದ್ದಾರೆ.
ರಂಗರಾಜನ್ ಅವರ ಈ ಹೇಳಿಕೆಗೆ ಆರ್ಥಿಕ ತಜ್ಞರು, ವಿಶ್ಲೇಷಕರು, ಚಿಂತಕರು ಕೂಡಾ ಧ್ವನಿಗೂಡಿಸಿ ನಿಗದಿತ ಗುರಿ ತಲುಪುವುದು ಕಷ್ಟವೆಂದು ಹೇಳಿದ್ದಾರೆ.
ಮುಂದಿನ 5 ವರ್ಷಗಳಲ್ಲಿ ಸುಮಾರು 2.7 ಟ್ರಿಲಿಯನ್ ಡಾಲರ್ನಷ್ಟಿರುವ ಆರ್ಥಿಕತೆಯನ್ನು 5 ಟ್ರಿಲಿಯನ್ ಡಾಲರ್ ಗೆ ಹೆಚ್ಚಿಸಬೇಕಾದಲ್ಲಿ ಬೆಳವಣಿಗೆಯ ದರ ವಾರ್ಷಿಕವಾಗಿ ಶೇಕಡ 9ಕ್ಕಿಂತ ಅಧಿಕವಾಗಿರಬೇಕು. ಹಾಗಾದಲ್ಲಿ ಮಾತ್ರ ಗುರಿ ತಲುಪಲು ಸಾಧ್ಯ ಎಂದು ಹೇಳಿದ್ದಾರೆ.