ಬೆಳಗಾವಿ, ನ.23(Daijiworld News/SS): ಎಲ್ಲಾ 15 ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳು ಆಯ್ಕೆ ಆಗಲಿದ್ದಾರೆ ಎಂಬ ವಿಶ್ವಾಸ ಇದೆ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿ ಅಧಿಕಾರಕ್ಕೆ ಬರಲು ಕಾರಣರಾದ ಶಾಸಕರ ಕ್ಷೇತ್ರಗಳಲ್ಲಿ ಚುನಾವಣೆ ಇದ್ದು, ಗೆದ್ದು ಬರುವ ಎಲ್ಲ ಶಾಸಕರಿಗೆ ಮಂತ್ರಿ ಭಾಗ್ಯ ಸಿಗಲಿದೆ. ಈ ಶಾಸಕರು ರಾಜೀನಾಮೆ ನೀಡಿದ್ದಕ್ಕಾಗಿ ನಾನು ಮುಖ್ಯಮಂತ್ರಿ ಆಗಿದ್ದೇನೆ. ಅವರಿಗೆ ಕೊಟ್ಟ ಮಾತು ಉಳಿಸಿಕೊಳ್ಳುವ ಜವಾಬ್ದಾರಿ ನಮ್ಮದು. ಅವರಿಗೆ ಅನ್ಯಾಯ ಆಗದಂತೆ ನೋಡಿಕೊಳ್ಳಲಾಗುವುದು. ಎಲ್ಲರನ್ನೂ ಮಂತ್ರಿ ಮಾಡಲಾಗುವುದು ಎಂದು ಹೇಳಿದರು.
ಇದೇ ವೇಳೆ ಜಿಲ್ಲೆಯಲ್ಲಿ ನದಿಗಳ ಪ್ರವಾಹದಿಂದ ಮುಳುಗಡೆಯಾದ ಪ್ರದೇಶಗಳ ಸ್ಥಳಾಂತರಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದ ಅವರು, ಇದಕ್ಕಾಗಿ ಅಗತ್ಯ ಭೂಮಿಯನ್ನು ಖರೀದಿಸಿ ನವ ನಿರ್ಮಾಣ ಮಾಡಿ ಸ್ಥಳಾಂತರಿಸಲಾಗುವುದು ಎಂದು ಹೇಳಿದರು.
ಈ ಹಿಂದಿನ ಸರ್ಕಾರದ ನಿರ್ಲಕ್ಷ್ಯದಿಂದಾಗಿ ಈ ಭಾಗದಲ್ಲಿ ಬಸವೇಶ್ವರ ಏತ ನೀರಾವರಿ ಯೋಜನೆ ಅನುಷ್ಠಾನಕ್ಕೆ ಹಿನ್ನೆಡೆಯಾಗಿದೆ. ಮುಂದಿನ ದಿನಗಳಲ್ಲಿ ಈ ಯೋಜನೆ ಪೂರ್ಣಗೊಳಿಸಲು ಪ್ರಯತ್ನ ಮಾಡಲಾಗುವುದು ಎಂದು ತಿಳಿಸಿದರು.