ಮುಂಬೈ, ನ 24(Daijiworld News/MB) : ಮಹಾರಾಷ್ಟ್ರದಲ್ಲಿ ನಡೆದ ರಾಜಕೀಯ ಬೆಳವಣಿಗೆಯಲ್ಲಿ ದಿನ ಬೆಳಗಾಗುವುದರಲ್ಲಿ ಬಿಜೆಪಿ ಸರಕಾರ ರಚನೆ ಮಾಡಲು ಅವಕಾಶ ಮಾಡಿಕೊಟ್ಟ ರಾಜ್ಯಪಾಲ ಭಗತ್ ಸಿಂಗ್ ಕೊಶ್ಯಾರಿ ಅವರ ನಿರ್ಧಾರ ವಿರುದ್ಧ ಕಾಂಗ್ರೆಸ್, ಎನ್ ಸಿಪಿ ಮತ್ತು ಶಿವಸೇನೆ ಸಲ್ಲಿಸಿದ್ದ ರಿಟ್ ಅರ್ಜಿಯ ವಿಚಾರಣೆಯನ್ನು ಇಂದು ನಡೆಸಿದ ಸುಪ್ರೀಂ ಕೋರ್ಟ್ ತೀರ್ಪನ್ನು ನಾಳೆಗೆ ಕಾದಿರಿಸಿದೆ. ನಾಳೆ ಬೆಳಗ್ಗೆ 10.30ಕ್ಕೆ ತೀರ್ಪು ನೀಡಲಿದೆ.
ಮೂವರು ನ್ಯಾಯಾಧೀಶರನ್ನೊಳಗೊಂಡ ನ್ಯಾಯಪೀಠ ಮೂರು ಪಕ್ಷಗಳು ಸಲ್ಲಿಸಿದ್ದ ರಿಟ್ ಅರ್ಜಿಯ ವಿಚಾರಣೆ ನಡೆಸಿದೆ.
ಈ ಸಂದರ್ಭದಲ್ಲಿ "ಸರ್ಕಾರ ರಚನೆ ಮಾಡಲು ಒಟ್ಟು 145 ಸೀಟುಗಳು ಅಗತ್ಯವಿದೆ. ಬಿಜೆಪಿಯಲ್ಲಿ ಬಹುಮತವಿದ್ದರೆ ಅವರು ಕೂಡಲೇ ತೋರಿಸಲಿ. ಚುನಾವಣಾ ಪೂರ್ವದಲ್ಲಿ ಮಾಡಿದ ಮೈತ್ರಿ ಮುಖ್ಯವಾಗುತ್ತದೆ. ಆದರೆ ತಮ್ಮ ಅನುಕೂಲಕ್ಕೆ ತಕ್ಕಂತೆ ಚುನಾವಣಾ ಪೂರ್ವ ಮೈತ್ರಿಯನ್ನು ಮುರಿಯಲಾಗಿದೆ. ಆದರೆ ಇಂದು ನಾವು ಚುನಾವಣೆ ಸಂದರ್ಭದಲ್ಲಿ ಮಾಡಿದ್ದ ಮೈತ್ರಿಯನ್ನು ಉಳಿಸಿಕೊಂಡಿದ್ದೇವೆ. ನಮ್ಮಲ್ಲಿ ಬಹುಮತವಿದ್ದು ನಾವು ನಾಳೆಯೇ ಸದನದಲ್ಲಿ ಬಹುಮತ ತೋರಿಸಲು ಸಿದ್ದರಾಗಿದ್ದೇವೆ. ಕರ್ನಾಟಕದಲ್ಲಿಯೂ ಈ ಪರಿಸ್ಥಿತಿ ಎದುರಾಗಿತ್ತು ಎಂದು ಶಿವಸೇನೆ ಪರ ಹಿರಿಯ ವಕೀಲ ಕಪಿಲ್ ಸಿಬಲ್ ವಾದ ಮಂಡಿಸಿದರು.
ಎನ್ ಸಿಪಿ ಹಾಗೂ ಕಾಂಗ್ರೆಸ್ ಪರ ವಾದ ಮಂಡಿಸಿದ ನ್ಯಾಯವಾದಿ ಅಭಿಷೇಕ್ ಸಿಂಘ್ವಿ, ಮೊನ್ನೆ ರಾತ್ರಿ ಉದ್ಧವ್ ಠಾಕ್ರೆಯವರು ನಮ್ಮಲ್ಲಿ ಬಹುಮತವಿದೆ, ಸರ್ಕಾರ ರಚಿಸುತ್ತೇವೆ ಎಂದು ಹೇಳಿದ ಮೇಲೂ ರಾಜ್ಯಪಾಲರು ಅವರನ್ನು ಕಾಯದೆ ಯಾಕಾಗಿ ಒಮ್ಮಿಂದೊಮ್ಮೆ ಬಿಜೆಪಿಗೆ ಪ್ರಮಾಣವಚನ ಸ್ವೀಕರಿಸಲು ಅವಕಾಶ ಮಾಡಿಕೊಟ್ಟರು ಎಂದು ವಾದಿಸಿದರು.